ಬೆಳ್ತಂಗಡಿ :ಮರೋಡಿ ಗ್ರಾಮದಲ್ಲಿ ನವವಿವಾಹಿತೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಶುಕ್ರವಾರ ನಡೆದಿದೆ.

ಮೃತ ವ್ಯಕ್ತಿ ಪಚ್ಚಡಿ ಮನೆಯ ಮೂಕಾಂಬಿಕಾ ನಿಲಯದ ನಿವಾಸಿ ವಾಣಿಶ್ರೀ (26) ಅವರು. ಒಂದು ವರ್ಷ ಮೂರು ತಿಂಗಳ ಹಿಂದೆ ಪ್ರಶಾಂತ್ ಎಂಬುವವರೊಂದಿಗೆ ವಿವಾಹವಾಗಿದ್ದ ಇವರಿಗೆ ವೈವಾಹಿಕ ಜೀವನದಲ್ಲಿ ತೊಂದರೆಗಳಿಂದಾಗಿ ಈ ಕೃತ್ಯಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.

ಶುಕ್ರವಾರ ಮನೆಯಲ್ಲಿಯೇ ಇದ್ದ ವೇಳೆ ವಾಣಿಶ್ರೀ ವಿಷ ಸೇವಿಸಿದ್ದಾಗಿ ತಿಳಿದು ಬಂದಿದೆ. ಹೊಟ್ಟೆನೋವು ಎಂದು ದೂರಿದ್ದಾಗ ಪಕ್ಕದ ಮನೆಯಲ್ಲಿದ್ದ ಅವರ ದೊಡ್ಡಮ್ಮನಿಗೆ ಅನುಮಾನ ಬಂದಿದೆ. ತಕ್ಷಣ ಅವರು ಪತಿ ಪ್ರಶಾಂತ್‌ ಗೆ ಕರೆ ಮಾಡಲು ಯತ್ನಿಸಿದರೂ, ಅವರು ಕಾರ್ಯಕ್ರಮವೊಂದಕ್ಕೆ ತೆರಳಿದ್ದರಿಂದ ಸಂಪರ್ಕ ಸಾಧ್ಯವಾಗಿಲ್ಲ.

ನಂತರ ವಾಣಿಶ್ರೀ ಅವರ ತಂದೆ ರಾಜು ಅವರಿಗೆ ಕರೆ ಮಾಡಿ ವಿಷಯ ತಿಳಿಸಲಾಗಿದೆ. ತಕ್ಷಣವೇ ಕುಟುಂಬಸ್ಥರು ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರು ಪತಿ ಪ್ರಶಾಂತ್, ತಂದೆ ರಾಜು, ತಾಯಿ ಪ್ರೇಮ ಹಾಗೂ ಇತರೆ ಕುಟುಂಬಸ್ಥರನ್ನು ಅಗಲಿದ್ದಾರೆ. ಈ ಕುರಿತು ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!