ಇಡೀ ದೇಶದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದ ನಗರದ ಚಿನ್ನಸ್ವಾಮಿ ಕ್ರೀಡಾಂಗಣದ ಆವರಣದಲ್ಲಿ ನಡೆದ ಕಾಲ್ತುಳಿತ ಪ್ರಕರಣದಲ್ಲಿ ಅಮಾನತುಗೊಂಡಿದ್ದ ನಿಕಟಪೂರ್ವ ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ್‌ ಸಹಿತ ನಾಲ್ವರು ಪೊಲೀಸ್‌ ಅಧಿಕಾರಿಗಳ ಅಮಾನತು ಆದೇಶವನ್ನು ಸರಕಾರ ಸೋಮವಾರ ಹಿಂಪಡೆದುಕೊಂಡಿದೆ.

ನಿಕಟಪೂರ್ವ ನಗರ ಪೊಲೀಸ್‌ ಆಯಕ್ತ ಬಿ.ದಯಾನಂದ್‌, ಕೇಂದ್ರ ವಿಭಾಗದ ಡಿಸಿಪಿಯಾಗಿದ್ದ ಎಚ್‌.ಟಿ.ಶೇಖರ್‌, ಕಬ್ಬನ್‌ ಪಾರ್ಕ್‌ ಉಪವಿಭಾಗದ ಎಸಿಪಿಯಾಗಿದ್ದ ಬಾಲಕೃಷ್ಣ, ಪಿಐ ಎ.ಕೆ.ಗಿರೀಶ್‌ ಅವರ ಅಮಾನತು ಆದೇಶವನ್ನು ಹಿಂಪಡೆಯಲಾಗಿದೆ. ಆದರೆ ಹೆಚ್ಚುವರಿ ಪೊಲೀಸ್‌ ಆಯುಕ್ತರಾಗಿದ್ದ ವಿಕಾಸ್‌ ಕುಮಾರ್‌ ವಿಕಾಸ್‌ ಅವರ ಅಮಾನತು ಆದೇಶ ರದ್ದತಿ ಬಗ್ಗೆ ಯಾವುದೇ ಉಲ್ಲೇಖವಿಲ್ಲ.

ಪೊಲೀಸ್‌ ಅಧಿಕಾರಿಗಳ ಅಮಾನತಿಗೆ ಸಾರ್ವಜನಿಕ ವಲಯದಲ್ಲಿ ಭಾರೀ ಟೀಕೆಗಳು ವ್ಯಕ್ತವಾಗಿತ್ತು. ವಿಪಕ್ಷಗಳು ಕೂಡ ಸರಕಾರದ ವಿರುದ್ಧ ಮುಗಿಬಿದ್ದಿದ್ದವು. ಕಾಲು¤ಳಿತಕ್ಕೆ ಸರಕಾರದ ನಿರ್ಲಕ್ಷ್ಯವೇ ಕಾರಣ. ಅದಕ್ಕೆ ಅಧಿಕಾರಿಗಳನ್ನು ಹೊಣೆ ಮಾಡಲಾಗಿದೆ ಎಂದು ಆರೋಪಿಸಿದ್ದವು. ಈ ಬೆನ್ನಲ್ಲೇ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಜಗದೀಶ್‌ ನೇತೃತ್ವದಲ್ಲಿ ಮ್ಯಾಜಿಸ್ಟ್ರೇಟ್‌ ತನಿಖೆ ಹಾಗೂ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳಾದ ಜಾನ್‌ ಮೈಕಲ್‌ ಡಿ. ಕುನ್ನಾ ಅವರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ಆದೇಶಿಸಿತ್ತು.

ಈ ಎರಡು ತನಿಖಾ ವರದಿಯಲ್ಲೂ ಈ ಐವರು ಅಧಿಕಾರಿಗಳು ಮತ್ತು ಆರ್‌ಸಿಬಿ, ಕೆಎಸ್‌ಸಿಎ, ಕಾರ್ಯಕ್ರಮ ಆಯೋಜಕ ಸಂಸ್ಥೆ ಡಿಎನ್‌ಎ ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದಲೇ ದುರ್ಘ‌ಟನೆ ಸಂಭವಿಸಿದೆ ಎಂದು ಉಲ್ಲೇಖೀಸಿತ್ತು. ಆದರೂ ಏಕಾಏಕಿ ನಾಲ್ವರು ಅಧಿಕಾರಿಗಳ ಅಮಾನತು ಆದೇಶ ಹಿಂಪಡೆದ ಸರಕಾರದ ಕ್ರಮ ಚರ್ಚೆಗೆ ಎಡೆಮಾಡಿಕೊಟ್ಟಿದೆ.

ವಿಕಾಸ್‌ ಕುಮಾರ್‌ ಅಮಾನತು ರದ್ದು ಇಲ್ಲ
ವಿಕಾಸ್‌ ಕುಮಾರ್‌ ವಿಕಾಸ್‌ ಅವರು ಸರಕಾರದ ಅಮಾನತು ಕ್ರಮ ಪ್ರಶ್ನಿಸಿ ಕೇಂದ್ರ ಆಡಳಿತ ನ್ಯಾಯಮಂಡಳಿ (ಸಿಎಟಿ) ಮೊರೆ ಹೋಗಿದ್ದರು. ಸಿಎಟಿ ರಾಜ್ಯ ಸರಕಾರದ ಅಮಾನತು ಆದೇಶವನ್ನು ರದ್ದುಪಡಿಸಿತ್ತು. ಇದನ್ನು ಪ್ರಶ್ನಿಸಿ ರಾಜ್ಯ ಸರಕಾರ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ. ಹೀಗಾಗಿ ವಿಕಾಸ್‌ ಕುಮಾರ್‌ ಅವರ ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಅವರ ಅಮಾನತು ಹಿಂಪಡಿದಿಲ್ಲ ಎಂದು ಪೊಲೀಸ್‌ ಇಲಾಖೆ ಮೂಲಗಳು ತಿಳಿಸಿವೆ.

ಇಲಾಖಾ ತನಿಖೆ ಮುಂದುವರಿಕೆ
ಅಮಾನತು ಆದೇಶ ಹಿಂಪಡೆದುಕೊಂಡಿರುವ ಸರಕಾರ, ತತ್‌ಕ್ಷಣವೇ ಸೇವೆಗೆ ಮರು ನಿಯೋಜಿಸಬೇಕು ಎಂದು ಹೇಳಿದೆ. ಇದೇ ವೇಳೆ ನಾಲ್ವರು ಅಧಿಕಾರಿಗಳ ವಿರುದ್ಧ ಇಲಾಖಾ ತನಿಖೆ ಮುಂದುವರಿಯಲಿದೆ ಎಂದು ಸರಕಾರ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!