
ಪುತ್ತೂರು: ಪ್ರತಿ ವರ್ಷದಂತೆ ಜಿಲ್ಲಾ ಮಟ್ಟದಲ್ಲಿ ಪ್ರಕಟಿಸಲಾಗುವ “ಜಿಲ್ಲಾ ಅಂಕಿ-ಅಂಶಗಳ ನೋಟ” ಮಾದರಿಯಲ್ಲಿ, ಈ ವರ್ಷ ಪ್ರಥಮ ಬಾರಿಗೆ ಪುತ್ತೂರು ತಾಲೂಕು ಮಟ್ಟದ “ತಾಲೂಕು ಅಂಕಿ-ಅಂಶಗಳ ನೋಟ” ರೂಪಿಸಲು ನಿರ್ಧರಿಸಲಾಗಿದೆ. ಇದನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲಾಗುತ್ತಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಯೋಜನಾಧಿಕಾರಿ ಹಾಗೂ ಪುತ್ತೂರು ತಾಲೂಕು ಪಂಚಾಯತ್ ಆಡಳಿತಾಧಿಕಾರಿ ಸಂಧ್ಯಾ ಕೆ.ಎಸ್. ತಿಳಿಸಿದರು.
ಅವರು ಆ. 2ರಂದು ಪುತ್ತೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ “2024–25 ನೇ ಸಾಲಿನ ತಾಲೂಕು ಅಂಕಿ ಅಂಶಗಳ ಸಂಗ್ರಹ ಕಾರ್ಯಾಗಾರ”ದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ, ದ.ಕ.ಜಿಪಂ ಸಹಯೋಗದಲ್ಲಿ ಈ ಕಾರ್ಯಾಗಾರ ಆಯೋಜಿಸಲಾಗಿತ್ತು.
ವಿಸ್ತೃತ ಮಾಹಿತಿ ಸಿದ್ಧತೆ:
“ಪುತ್ತೂರು ಈಗಾಗಲೇ ಹಲವು ಕ್ಷೇತ್ರಗಳಲ್ಲಿ ಪ್ರಗತಿಯನ್ನು ದಾಖಲಿಸಿದೆ. ಈ ನೋಟದಲ್ಲಿ ಕಂದಾಯ ಇಲಾಖೆ, ನಗರಸಭೆ, ವಿವಿಧ ಶಾಖೆಗಳು ಹಾಗೂ ಗ್ರಾಮ ಪಂಚಾಯತ್‌ಗಳಿಂದ ಒಟ್ಟು 15 ಕೋಷ್ಠಕಗಳು, 76 ಟೇಬಲ್‌ಗಳು ಹಾಗೂ 900ಕ್ಕೂ ಅಧಿಕ ಸೂಚನೆಗಳನ್ನು ಒಳಗೊಂಡಂತೆ ವಿವರಿತ ಅಂಕಿ-ಅಂಶಗಳು ಸಂಗ್ರಹಗೊಳ್ಳಲಿವೆ” ಎಂದು ಸಂಧ್ಯಾ ಕೆ.ಎಸ್. ಹೇಳಿದರು.
ಕಾರ್ಯಾಗಾರದಲ್ಲಿ ಜಿಲ್ಲಾ ಸಾಂಖ್ಯಿಕಾಧಿಕಾರಿ ಶ್ರೀಧರ್ ಅವರು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಅಂಕಿ-ಅಂಶಗಳ ಸಂಗ್ರಹ ವಿಧಾನವನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡವರು:
ಪುತ್ತೂರು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಸ್ವಾಗತಿಸಿದರು. ಸಹಾಯಕ ಲೆಕ್ಕಾಧಿಕಾರಿ ರವಿಚಂದ್ರ ಯು. ವಂದಿಸಿದರು. ಸಹಾಯಕ ನಿರ್ದೇಶಕರು (ಪ.ರಾ.) ಹಾಗೂ ತಾಲೂಕು ಯೋಜನಾಧಿಕಾರಿ ನಾಗೇಶ್ ಎಂ. ಕಾರ್ಯಕ್ರಮ ನಿರ್ವಹಿಸಿದರು.









