ವಿಟ್ಲ: ಯಕ್ಷಗಾನ ಲೋಕದಲ್ಲಿ “ರಸಿಕ ರತ್ನ” ಬಿರುದನ್ನು ಪಡೆದ ಪ್ರಸಿದ್ಧ ಹಾಸ್ಯ ಕಲಾವಿದ ದಿ. ಗೋಪಾಲಕೃಷ್ಣ ಜೋಶಿಯವರ ಹಿರಿಯ ಪುತ್ರ, ಕರ್ನಾಟಕ ಬ್ಯಾಂಕ್‌ನ ನಿವೃತ್ತ ಉದ್ಯೋಗಿ ರವಿ ಜೋಶಿ (68) ಅವರು ಇಂದು ಬೆಳಿಗ್ಗೆ ಆತ್ಮಹತ್ಯೆ ಮಾಡಿಕೊಂಡಿರುವ ದುರಂತ ಘಟನೆ ವಿಟ್ಲದ ಅಡ್ಡದ ಬೀದಿಯಲ್ಲಿ ನಡೆದಿದೆ.
ಮನೆ ಮುಂದಿರುವ ಬಾವಿಗೆ ಹಾರಿ ಜೀವ ಮುಗಿಸಿದ ರವಿ ಜೋಶಿಯವರ ಶವವನ್ನು ಸ್ಥಳೀಯರು ಪತ್ತೆಹಚ್ಚಿದ್ದಾರೆ. ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಮೂರು ವರ್ಷಗಳ ಹಿಂದೆ ಹಿರಿಯ ಪುತ್ರಿಯ ಅಕಾಲಿಕ ನಿಧನದಿಂದ ಮನೋವೈಕಲ್ಯಕ್ಕೊಳಗಾಗಿ, ಆರೋಗ್ಯ ಸಮಸ್ಯೆಗಳಿಂದ ಜರ್ಜರಿತರಾಗಿದ್ದ ಅವರು, ಪತ್ನಿ ಹಾಗೂ ವೃದ್ಧೆ ತಾಯಿ ಮನೆಯೊಳಗಿದ್ದ ವೇಳೆ ಬಾವಿಗೆ ಹಾರಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೃತರು ಪತ್ನಿ, ಒಂದು ಹೆಣ್ಣು ಮಗಳು, ವೃದ್ಧೆ ತಾಯಿ ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾರೆ.














