
ಬೆಂಗಳೂರು: ದರ್ಶನ್ ವಿರುದ್ಧ ಮಾತನಾಡಿದ್ದ ನಟಿ ರಮ್ಯಾ ಅವರಿಗೆ ಕೆಲವರು ಅಶ್ಲೀಲ ಸಂದೇಶ ಕಳಿಸಿದ್ದರು. ಈ ಬಗ್ಗೆ ರಮ್ಯಾ ದೂರು ನೀಡಿದ್ದರು. ಈ ಬಗ್ಗೆ ತನಿಖೆ ಆರಂಭಿಸಿದ ಸೈಬರ್ ಪೊಲೀಸರು ಆರೋಪಿಗಳಿಗೆ ಬಲೆ ಬೀಸಿದ್ದರು. ಇದುವರೆಗೂ 7 ಜನರನ್ನು ಬಂಧಿಸಲಾಗಿತ್ತು. ಈಗ ಉಡುಪಿ ಮೂಲದ ಇನ್ನಿಬ್ಬರನ್ನು ಬಂಧಿಸಲಾಗಿದೆ.
ಸುಜನ್ ಮತ್ತು ಆದರ್ಶ್ ಎಂಬುವರವನ್ನು ಅರೆಸ್ಟ್ ಮಾಡಲಾಗಿದೆ. ಅಲ್ಲಿಗೆ ಒಟ್ಟು 9 ಜನರನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದಂತಾಗಿದೆ.
40ಕ್ಕೂ ಅಧಿಕ ಸೋಶಿಯಲ್ ಮೀಡಿಯಾ ಖಾತೆಗಳಿಂದ ರಮ್ಯಾ ಅವರಿಗೆ ಅಶ್ಲೀಲ ಸಂದೇಶ ಬಂದಿತ್ತು. ಆ ಪೈಕಿ ಕೆಲವು ಅಸಭ್ಯ ಕಮೆಂಟ್ಗಳನ್ನು ರಮ್ಯಾ ಅವರು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಮಾಡುವ ಮೂಲಕ ಎಲ್ಲವನ್ನೂ ಬಯಲಿಗೆ ಎಳೆದಿದ್ದರು. ಇಂಥವರಿಗೆ ಕಾನೂನಿನ ಮೂಲಕ ಪಾಠ ಕಲಿಸುವ ಉದ್ದೇಶದಿಂದ ರಮ್ಯಾ ದೂರು ನೀಡಿದರು.
‘ಸೆಲೆಬ್ರಿಟಿಯಾದ ನಮಗೆ ಟ್ರೋಲ್ ಇದ್ದೇ ಇರುತ್ತದೆ. ಆದರೆ ಈ ಮಟ್ಟಕ್ಕೆ ನನಗೆ ಯಾವಾಗಲೂ ಅನುಭವ ಆಗಿರಲಿಲ್ಲ. ರೇಣುಕಾಸ್ವಾಮಿ ಸಂದೇಶ ಕಳಿಸಿದ್ದಕ್ಕೂ ದರ್ಶನ್ ಅಭಿಮಾನಿಗಳು ಸಂದೇಶ ಕಳಿಸಿದ್ದಕ್ಕೂ ಯಾವುದೇ ವ್ಯತ್ಯಾಸವಿಲ್ಲ ಅನಿಸಿತು. ನನಗೆ ಈ ರೀತಿ ಕಳಿಸಿದ್ದಾರೆ ಎಂದರೆ ಸಾಮಾನ್ಯ ಹೆಣ್ಮಕ್ಕಳಿಗೆ ಇನ್ನು ಯಾವ ರೀತಿ ಮೆಸೇಜ್ ಕಳಿಸಿರಬಹುದು. ನಮ್ಮ ಸಮಾಜ ಎಷ್ಟು ಕೀಳು ಮಟ್ಟಕ್ಕೆ ಬಂದಿದೆ ಅಂತ ನನಗೆ ಬೇಸರ ಆಯಿತು. ಇದನ್ನು ಸುಮ್ಮನೆ ಬಿಡಬಾರದು ಅಂತ ನನಗೆ ಅನಿಸಿತು. ಹಾಗಾಗಿ ಕಮಿಷನರ್ ಸಾಹೇಬರಿಗೆ ನಾನು ದೂರು ಕೊಟ್ಟಿದ್ದೇನೆ’ ಎಂದು ರಮ್ಯಾ ಹೇಳಿದ್ದರು.






