ಮಂಗಳೂರು: ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದ ಬಳಿ ಆಟೋ ಕಾಯುತ್ತಿದ್ದ ವ್ಯಕ್ತಿಯನ್ನು ಸುಳ್ಳು ಕಸ್ಟಮ್ಸ್ ಅಧಿಕಾರಿಗಳಂತೆ ನಟಿಸಿದ ಶಡ್ಯಂತ್ರದಡಿ ಅಪರಿಚಿತರು ಅಪಹರಿಸಿ, ಸುಮಾರು 35 ಲಕ್ಷ ರೂ. ಮೌಲ್ಯದ ಚಿನ್ನವನ್ನು ದರೋಡೆ ಮಾಡಿದ ಘಟನೆಗೆ ಸಂಬಂಧಿಸಿದಂತೆ, ಮಂಗಳೂರು ನಗರ ಪೊಲೀಸರು ಮಹಾರಾಷ್ಟ್ರದ ಪುಣೆಯಲ್ಲಿ 5 ಜನ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.

ಆಗಸ್ಟ್ 13, 2025 ರಂದು ಬೆಳಿಗ್ಗೆ 7 ಗಂಟೆಗೆ, ದೂರುದಾರ ಹರಿ ಭಾನುದಾಸ ಥೋರಟ್ ಅವರನ್ನು ಮಂಗಳೂರು ರೈಲ್ವೆ ನಿಲ್ದಾಣದ ಹತ್ತಿರ ಕೈರಾಳಿ ಹೋಟೆಲ್ ಬಳಿಯಲ್ಲಿ ಆರು ಜನ ಅಪರಿಚಿತರು ಇನ್ನೋವಾ ಕಾರಿನಲ್ಲಿ ಬಂದು ತಡೆದು “ನಾವು ಕಸ್ಟಮ್ ಅಧಿಕಾರಿಗಳು, ನಿಮ್ಮ ವಿರುದ್ಧ ಮಾಹಿತಿ ಇದೆ” ಎಂದು ಬೆದರಿಸಿ ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು ಹೋಗಿದ್ದರು. ನಂತರ, ಅವರನ್ನು ಉಡುಪಿ ಹೈವೇ ಮಾರ್ಗವಾಗಿ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಲುಪಿಸಿ, 350 ಗ್ರಾಂ ತೂಕದ ಶುದ್ಧ ಬಂಗಾರದ ಗಟ್ಟಿ (ಅಂದಾಜು ಮೌಲ್ಯ ರೂ.35 ಲಕ್ಷ) ದರೋಡೆ ಮಾಡಿ, ಶಿರಸಿ ತಾಲೂಕಿನ ಅಂತ್ರವಳ್ಳಿಯಲ್ಲಿ ಬಿಟ್ಟು ಪರಾರಿಯಾಗಿದ್ದರು.

ಕುಮುಟಾ ಠಾಣೆಯಲ್ಲಿ ದೂರು ದಾಖಲಾಗಿದ್ದು, ನಂತರ ಪ್ರಕರಣವನ್ನು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ಅ.ಕ್ರ.171/2025, ಕಲಂ 310(2), 137(2), 204 ಬಿ.ಎನ್.ಎಸ್. ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣ ಭೇದಿಸಲು ಪೊಲೀಸ್ ಆಯುಕ್ತರ ನಿರ್ದೇಶನದಲ್ಲಿ ಸಿಸಿಬಿ ಅಧಿಕಾರಿಗಳು ಹಾಗೂ ಕೇಂದ್ರ ಉಪವಿಭಾಗದ ತಂಡ ಕಾರ್ಯಾಚರಣೆ ನಡೆಸಿ, ತಾಂತ್ರಿಕ ಸಾಕ್ಷ್ಯಾಧಾರಗಳ ಆಧಾರದಲ್ಲಿ ಆಗಸ್ಟ್ 18ರಂದು ಮಹಾರಾಷ್ಟ್ರದ ಪುಣೆಯಲ್ಲಿ 5 ಜನ ಆರೋಪಿಗಳನ್ನು ಬಂಧಿಸಲು ಯಶಸ್ವಿಯಾದರು.

ಆರೋಪಿಗಳು ವಿಚಾರಣೆಯಲ್ಲಿ ತಪ್ಪೋಪ್ಪಿಗೆ ನೀಡಿ, ದೊಚ್ಚಿದ ಚಿನ್ನವನ್ನು ಮಾರಾಟ ಮಾಡಿದ ಬಗ್ಗೆ ಮಾಹಿತಿ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಅವರನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ಕೈಗೊಳ್ಳಲಾಗುವುದು. ದರೋಡೆಗೆ ಬಳಸಿದ ವಾಹನ ಹಾಗೂ ದೊಚ್ಚಿದ ಚಿನ್ನವನ್ನು ವಶಪಡಿಸಿಕೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!