ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಮಹಾತ್ವಾಕಾಂಕ್ಷೆಯ ಶಕ್ತಿ ಯೋಜನೆ ಗೋಲ್ಡನ್ ಬುಕ್ ಆಫ್ ವಲ್ಡ್ ರೆಕಾರ್ಡ್ಸ್ಗೆ ದಾಖಲಾಗಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಜಾಲತಾಣದಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.
ಪ್ರಾಮಾಣಿಕ ಸೇವೆ ಅನನ್ಯ, ಅಭಿನಂದನೀಯ. ಇದರೊಂದಿಗೆ ಕಾರ್ಮಿಕ ಮುಖಂಡರುಗಳ ಸಹಕಾರವನ್ನು ಮರೆಯುವಂತಿಲ್ಲ ಅವರಿಗೆ ನನ್ನ ಧನ್ಯವಾದಗಳು. ಶಕ್ತಿ ಯೋಜನೆಯ ಪ್ರಾರಂಭದಿಂದಲೂ ಬೆಂಬಲ, ಪ್ರೋತ್ಸಾಹ ಹಾಗೂ ಸಕಾರಾತ್ಮಕ ಬದಲಾವಣೆಗಳಿಗೆ ಸಲಹೆ ನೀಡುತ್ತಾ ಬಂದಿರುವ ಮಾಧ್ಯಮದವರಿಗೆ ಧನ್ಯವಾದಗಳು ಎಂದಿದ್ದಾರೆ.
ನಾನು ಸಾರಿಗೆ ಸಚಿವನಾಗಿ ಎರಡನೇ ಬಾರಿಗೆ ಅಧಿಕಾರ ವಹಿಸಿಕೊಂಡ ಕೂಡಲೇ ದೇಶದಲ್ಲೇ ಪ್ರಪ್ರಥಮ ಬಾರಿಗೆ ಜಾರಿಗೆ ತಂದ ಗ್ಯಾರೆಂಟಿ ಯೋಜನೆಯಾದ ಶಕ್ತಿ ಯೋಜನೆಯು ಅತ್ಯಂತ ಸವಾಲಿನಿಂದ ಕೂಡಿದ್ದಾಗಿತ್ತು. ಕಳೆದ ಐದಾರು ವರುಷಗಳಲ್ಲಿ ಸಾರಿಗೆ ಸಂಸ್ಥೆಗಳಲ್ಲಿ ಹೊಸ ಬಸ್ಸುಗಳ ಸೇರ್ಪಡೆಯಾಗಿಲ್ಲ, ಹೊಸ ನೇಮಕಾತಿ ಆಗಿಲ್ಲ, ಸಾರಿಗೆ ಸಂಸ್ಥೆಗಳು ಸಾಲದ ಸುಳಿಯಲ್ಲಿದ್ದವು. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಒಂದು ತಂಡವಾಗಿ ಕರ್ತವ್ಯ ನಿರ್ವಹಿಸಿ ಶಕ್ತಿ ಯೋಜನೆಯನ್ನು ಯಶಸ್ವಿಯಾಗಿ ಮುನ್ನಡೆಸಿರುವುದು ನನಗೆ ವೈಯಕ್ತಿಕವಾಗಿ ಸಂತೃಪ್ತಿ ತಂದಿದೆ ಎಂದಿದ್ದಾರೆ.
ಈ ಎರಡು ವರುಷಗಳ ಶಕ್ತಿ ಯೋಜನೆಯ ಹಾದಿಯಲ್ಲಿ ಸಾರಿಗೆ ಸಂಸ್ಥೆಗಳಲ್ಲಿ 5800 ಹೊಸ ಬಸ್ಗಳ ಸೇರ್ಪಡೆ,10000 ಹೊಸ ನೇಮಕಾತಿ, ಸಾಲ ಪಾವತಿಸಲು ಸರ್ಕಾರದಿಂದ 2000 ಕೋಟಿ ಸಹಾಯ, ಸಾರಿಗೆ ಸಂಸ್ಥೆಗಳ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳ ಇತರೆ ಅಮೂಲಾಗ್ರ ಬದಲಾವಣೆಗೆ ಕಾರಣವಾಗಿದೆ. ಸಾರಿಗೆ ಸಂಸ್ಥೆಗಳಲ್ಲಿ ಹತ್ತು ಹಲವು ಸವಾಲುಗಳಿದ್ದು, ಎಲ್ಲವನ್ನು ನಾನು ಇತ್ಯರ್ಥ ಪಡಿಸಲು ಸಾಧ್ಯವಿಲ್ಲ. ಆದರೆ, ಪ್ರಾಮಾಣಿಕವಾಗಿ ಪ್ರಯತ್ನ ಮಾಡಿದ್ದೇನೆ ಮತ್ತು ಮಾಡುತ್ತಿದ್ದೇನೆ.














