
ಕಾರ್ಕಳ, ಆ.26 :ಮಹಿಳೆಯ ಗೆಳೆತನದ ವಿಚಾರವಾಗಿ ವ್ಯಕ್ತಿಯೊಬ್ಬರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಕಾರ್ಕಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಟಲ್ಪಾಡಿ ಎಂಬಲ್ಲಿ ನಸುಕಿನ ವೇಳೆ ನಡೆದಿದೆ.
ಮೃತರನ್ನು ಮಂಗಳೂರು ಮೂಲದ ನವೀನ್ ಪೂಜಾರಿ ಎಂದು ಗುರುತಿಸಲಾಗಿದ್ದು, ಕೊಲೆ ಆರೋಪಿ ಬೆಳ್ತಂಗಡಿ ತಾಲೂಕು ನಾಡ ನಿವಾಸಿ ಪರೀಕ್ಷಿತ್ (44) ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಇಂದು ಬೆಳಗಿನ ಜಾವ ರಸ್ತೆ ಬದಿಯಲ್ಲಿ ನವೀನ್ ಪೂಜಾರಿಯ ಮೃತದೇಹ ಪತ್ತೆಯಾಗಿದ್ದು, ಚೂರಿ ಇರಿತದಿಂದ ಮೃತಪಟ್ಟಿರುವುದು ದೃಢಪಟ್ಟಿದೆ. ಸಿಸಿಟಿವಿ ಹಾಗೂ ತಾಂತ್ರಿಕ ಸಾಕ್ಷ್ಯಗಳನ್ನು ಪರಿಶೀಲಿಸಿದ ಬಳಿಕ, ಈ ಕೊಲೆಯನ್ನು ಪರೀಕ್ಷಿತ್ ಎಸಗಿರುವುದು ಬಹಿರಂಗವಾಗಿದೆ.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಮಾಹಿತಿ ನೀಡಿದ್ದು, ಆರೋಪಿ ಮಂಗಳೂರಿನಲ್ಲಿ ಬಸ್ ಚಾಲಕನಾಗಿದ್ದು, ಪತ್ನಿಯಿಂದ ವಿಚ್ಛೇದನೆ ಪಡೆದು ಕಾರ್ಕಳದಲ್ಲಿ ಬಾಡಿಗೆ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದಾನೆ. ಮೃತ ನವೀನ್ ಪೂಜಾರಿಯೂ ಕೂಡ ಕುಟುಂಬದಿಂದ ದೂರವಾಗಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು.
ಪರೀಕ್ಷಿತ್ ಪರಿಚಯದ ಮಹಿಳೆಯೊಂದಿಗೆ ನವೀನ್ ಪೂಜಾರಿ ಆತ್ಮೀಯವಾಗಿದ್ದುದರಿಂದ ಇವರ ನಡುವೆ ಗಲಾಟೆ ಉಂಟಾಗಿ, ಅದೇ ವೈಷಮ್ಯದಿಂದ ಕೊಲೆ ಎಸಗಿರುವುದು ತನಿಖೆಯಿಂದ ಬಹಿರಂಗವಾಗಿದೆ.






