ಮಂಗಳೂರು: ಕೂಳೂರಿನಲ್ಲಿ ರಸ್ತೆಗುಂಡಿ ಕಾರಣದಿಂದ ಸ್ಕೂಟರ್ ಸವಾರಿ ಬಿದ್ದು, ಹಿಂಬದಿಯಿಂದ ಬಂದ ಲಾರಿ ಹರಿದು ಮಹಿಳಾ ಸವಾರಿಯೊಬ್ಬರು ಮೃತಪಟ್ಟ ದುರಂತ ಘಟನೆ ಮಂಗಳವಾರ (ಸೆ. 09) ಬೆಳಿಗ್ಗೆ ನಡೆದಿದೆ.
ಮೃತರು ಸುರತ್ಕಲ್ ಕುಳಾಯಿ ನಿವಾಸಿ ಶ್ರೀಮತಿ ಮಾಧವಿ (44) ಎಂದು ಗುರುತಿಸಲಾಗಿದೆ. ಅವರು ಬೆಳಿಗ್ಗೆ ಸುಮಾರು 8.30 ಕ್ಕೆ ಕುಳಾಯಿ ಕಡೆಯಿಂದ ಕುಂಟಿಕಾನ ಕಡೆಗೆ ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ, ಕೂಳೂರಿನ ರಾಯಲ್ ಓಕ್ ಮುಂಭಾಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಇದ್ದ ದೊಡ್ಡ ಗುಂಡಿಯ ಪರಿಣಾಮ ವಾಹನ ಸಮೇತ ಬಿದ್ದುಹೋಗಿದ್ದಾರೆ.
ಆ ವೇಳೆಗೆ ಉಡುಪಿ ದಿಕ್ಕಿನಿಂದ ಮಂಗಳೂರು ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಬಂದ ಲಾರಿಯು (ಚಾಲಕ: ಮೊಹಮ್ಮದ್ ಫಾರೂಕ್) ಮಾಧವಿಯವರ ಮೇಲೆ ಹರಿದ ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ಅವಘಡಕ್ಕೆ ಕಾರಣವಾಗಿ ಹೆದ್ದಾರಿಯಲ್ಲಿದ್ದ ರಸ್ತೆಗುಂಡಿಯನ್ನು ಮುಚ್ಚದೆ ನಿರ್ಲಕ್ಷ್ಯ ವಹಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಅಜಾಗರೂಕತೆಯಿಂದ ಲಾರಿ ಚಲಾಯಿಸಿದ ಚಾಲಕನ ವಿರುದ್ಧ ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ಅ.ಕ್ರ 224/2025 ಕಲಂ 281, 106(1) ಬಿ.ಎನ್.ಎಸ್ ಮತ್ತು 198(ಎ) ಐಎಂವಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯ ಕುರಿತು ತನಿಖೆ ಪ್ರಾರಂಭವಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.














