
ಕಾಣಿಯೂರು: ಮಂಗಳೂರು ಸೆಂಟ್ರಲ್–ಸುಬ್ರಹ್ಮಣ್ಯ ರೋಡ್ ರೈಲು ಹಳಿಯ ವಿದ್ಯುದೀಕರಣ ಕಾಮಗಾರಿ ಪೂರ್ಣಗೊಂಡಿದ್ದು, ಸೆಪ್ಟೆಂಬರ್ 15ರಿಂದ ಈ ಮಾರ್ಗದಲ್ಲಿ ರೈಲುಗಳು ವಿದ್ಯುತ್ ಚಾಲಿತ ಎಂಜಿನ್ ಮೂಲಕ ಸಂಚರಿಸಲಿವೆ.
ಪ್ರಸ್ತುತ ಮಂಗಳೂರು ಸೆಂಟ್ರಲ್ ನಿಂದ ಬೆಳಿಗ್ಗೆ ಹೊರಡುವ ಪ್ಯಾಸೆಂಜರ್ ರೈಲು ಸುಬ್ರಹ್ಮಣ್ಯ ತಲುಪಿ ಮತ್ತೆ ಮಂಗಳೂರಿಗೆ ಮರಳುತ್ತದೆ. ಇದೇ ರೀತಿಯಲ್ಲಿ ಸಂಜೆ ರೈಲು ಕೂಡಾ ಎರಡೂ ಬದಿಯ ಸಂಚಾರ ನಡೆಸುತ್ತದೆ. ಇದಲ್ಲದೆ ಮಧ್ಯಾಹ್ನದ ಪ್ಯಾಸೆಂಜರ್ ರೈಲು ಸಹ ಇರುತ್ತದೆ. ಈ ಮೂರು ಸೇವೆಗಳೂ ಸೆ.15ರಿಂದ ಸಂಪೂರ್ಣ ವಿದ್ಯುತ್ ಚಾಲಿತ ಎಂಜಿನ್ ಮೂಲಕ ಸಂಚರಿಸಲಿವೆ.
ರೈಲ್ವೆ ಇಲಾಖೆ ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸಿದ್ದು, ಹಳಿಗಳ ಮೇಲ್ಬಾಗದಲ್ಲಿ ವಿದ್ಯುತ್ ತಂತಿ ಜೋಡಣೆ ಮಾಡಿ ಎಂಜಿನ್‌ಗಳಿಗೆ ಸಂಪರ್ಕ ಕಲ್ಪಿಸಲಾಗಿದೆ. ಈಗಾಗಲೇ ಪ್ರಯೋಗಾತ್ಮಕ ಸಂಚಾರ ಯಶಸ್ವಿಯಾಗಿದೆ.
ಕಳೆದ ಜೂನ್‌ನಿಂದ ಸುಬ್ರಹ್ಮಣ್ಯ ರೋಡ್–ಎಡಕುಮೇರಿ–ಹಾಸನ ಮಾರ್ಗದಲ್ಲೂ ವಿದ್ಯುದೀಕರಣ ಕಾಮಗಾರಿ ನಡೆಯುತ್ತಿದ್ದು, ಅದು ಪೂರ್ಣಗೊಂಡ ಬಳಿಕ ಮಂಗಳೂರು–ಬೆಂಗಳೂರು ರೈಲುಗಳೂ ವಿದ್ಯುತ್ ಚಾಲಿತವಾಗಲಿವೆ. ಭವಿಷ್ಯದಲ್ಲಿ ಮಂಗಳೂರು–ಬೆಂಗಳೂರು ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ಸೇವೆ ಪ್ರಾರಂಭಿಸಲು ಇದು ದಾರಿ ಮಾಡಿಕೊಡಲಿದೆ.






