
ಪುತ್ತೂರು: ರಾಜಕೀಯ ಮಾಡಬೇಕಾದದ್ದು ಚುನಾವಣಾ ಸಮಯದಲ್ಲಿ ಮಾತ್ರ, ಆದರೆ ಚುನಾವಣೆಯ ಬಳಿಕ ಪಕ್ಷ ಬೇಧವಿಲ್ಲದೆ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂದು ಶಾಸಕರಾದ ಅಶೋಕ್ ರೈ ಕರೆ ನೀಡಿದರು.
ಅವರು ನಿಡ್ಪಳ್ಳಿ ಶಾಂತದುರ್ಗಾ ದೇವಸ್ಥಾನದಲ್ಲಿ ದಸರಾ ಪ್ರಯುಕ್ತ ಆಯೋಜಿಸಲಾದ ದಸರಾ ಕ್ರೀಡಾಕೂಟದಲ್ಲಿ ಮಾತನಾಡಿದರು.
ಶಾಸಕರು ಮುಂದುವರಿದು, “ಇಷ್ಟು ವರ್ಷಗಳಲ್ಲಿ ಪುತ್ತೂರಿನಲ್ಲಿ ಬರ್ಕತ್ತಿನ ಆಸ್ಪತ್ರೆ ನಿರ್ಮಿಸಲು ಸಾಧ್ಯವಾಗಿಲ್ಲ. ಜನರಿಗೆ ಉಪಯೋಗವಾಗಲಿ ಎಂದು ಮೆಡಿಕಲ್ ಕಾಲೇಜು ತರಲು ಪ್ರಯತ್ನಿಸಿದರೂ ನಂಜಿ, ಕ್ರೀಡಾಂಗಣ ನಿರ್ಮಾಣಕ್ಕೂ ನಂಜಿ, ದೇವಸ್ಥಾನ ಅಭಿವೃದ್ಧಿಗೂ ನಂಜಿ – ಹೀಗೆ ನಂಜಿ ಕಾರುವುದು ಏನೂ ಸಾಧಿಸುವುದಿಲ್ಲ. ನಂಜಿ ಸ್ವಭಾವ ಮನುಷ್ಯನನ್ನು ಹಾಳುಮಾಡುತ್ತದೆ” ಎಂದು ಕಟುವಾಗಿ ಹೇಳಿದರು.
ಅವರು ಸ್ಪಷ್ಟಪಡಿಸಿ, “ಯಾರೇ ಏನು ಮಾಡಿದರೂ, ನನ್ನಿಂದ ಸಾಧ್ಯವಾದಷ್ಟು ಅನುದಾನವನ್ನು ತಂದು ಪುತ್ತೂರಿನ ಅಭಿವೃದ್ಧಿ ಮಾಡುತ್ತೇನೆ. ಅಭಿವೃದ್ಧಿಯಲ್ಲಿ ನಾನು ಎಂದಿಗೂ ರಾಜಕೀಯ ಮಾಡಿಲ್ಲ. ಕಾಂಗ್ರೆಸ್, ಬಿಜೆಪಿ ಸೇರಿದಂತೆ ಎಲ್ಲ ಪಕ್ಷದ ಕಾರ್ಯಕರ್ತರು ನನ್ನ ಬಳಿಗೆ ಬರುತ್ತಾರೆ. ನನ್ನ ಕಚೇರಿಗೆ ಬರುವವರ ಪಕ್ಷ ಏನೆಂದು ನಾನು ಕೇಳುವುದಿಲ್ಲ, ಸಹಾಯ ಮಾಡುವುದೇ ನನ್ನ ಕೆಲಸ” ಎಂದರು.
“ನಂಜಿ ಸ್ವಭಾವ ಬಿಟ್ಟು, ವಿಶಾಲ ಹೃದಯದಿಂದ ಎಲ್ಲವನ್ನೂ ಚಿಂತಿಸಿದರೆ ಸಮಾಜದ ಪ್ರಗತಿ ಸಾಧ್ಯ,” ಎಂದು ಶಾಸಕರು ಜನತೆಗೆ ಮನವಿ ಮಾಡಿದರು.
ವೇದಿಕೆಯಲ್ಲಿ ನಿಡ್ಪಳ್ಳಿ ವಲಯ ಕಾಂಗ್ರೆಸ್ ಅಧ್ಯಕ್ಷ ಹರೀಶ್, ಅವಿನಾಶ್ ಕುಡ್ಚಿಲ, ಗ್ರಾಪಂ ಸತೀಶ, ನಾಗೇಶ್ ಮೊದಲಾದವರು ಉಪಸ್ಥಿತರಿದ್ದರು.






