ಪುತ್ತೂರು: ರೈ ಎಜುಕೇಷನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪ್ರತಿವರ್ಷ ನಡೆಯುವ `ಅಶೋಕಾ-ಜನಮನ’ ದೀಪಾವಳಿ ಕಾರ್ಯಕ್ರಮ ಈ ಬಾರಿ ಅಕ್ಟೋಬರ್ 20ರಂದು ಪುತ್ತೂರಿನ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ವಿಜೃಂಭಣೆಯಿಂದ ನಡೆಯಲಿದೆ. 13ನೇ ವರ್ಷದ ಈ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಉದ್ಘಾಟಿಸಲಿದ್ದಾರೆ.

ಕಾರ್ಯಕ್ರಮದ ಕುರಿತು ಪತ್ರಿಕಾಗೋಷ್ಠಿಯಲ್ಲಿ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ – “ಈ ಹಿಂದೆ ಸಾಂಪ್ರದಾಯಿಕವಾಗಿ ಸೀರೆ ಮತ್ತು ಬೆಡ್‌ಶೀಟ್ ವಿತರಣೆ ಮಾಡುತ್ತಿದ್ದೆವು. ಆದರೆ ಜನರ ಅಭಿಪ್ರಾಯದಂತೆ ಈ ಬಾರಿ ಮನೆಗೆ ಉಪಯೋಗವಾಗುವ ಸ್ಟೀಲ್ ತಟ್ಟೆ, ಪಿಂಗಾಣಿ, ಗ್ಲಾಸ್, ಬೌಲ್ ಹಾಗೂ ಟವೆಲ್ ನೀಡಲು ನಿರ್ಧರಿಸಿದ್ದೇವೆ. ಮಕ್ಕಳಿಗೂ ವಿತರಣೆ ನಡೆಯಲಿದೆ” ಎಂದು ಹೇಳಿದರು. ಕಳೆದ ವರ್ಷ 85,650 ಮಂದಿಗೆ ಸೀರೆ ವಿತರಿಸಲಾಗಿದ್ದರೆ, ಈ ಬಾರಿ 1 ಲಕ್ಷ ಮಂದಿಯ ಭಾಗವಹಿಸುವಿಕೆ ನಿರೀಕ್ಷಿಸಲಾಗಿದೆ ಎಂದರು.

ಬೆಳಿಗ್ಗೆ 9.30ರಿಂದ ಸಂಜೆ 5 ಗಂಟೆಯವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯಲಿವೆ. ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಸೇರಿದಂತೆ ಹಲವು ಸಚಿವರು ಭಾಗವಹಿಸಲಿದ್ದಾರೆ. “ಇದು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮವಲ್ಲ, ಪಕ್ಷಾತೀತವಾದ ದೀಪಾವಳಿ ಸಂಭ್ರಮ” ಎಂದು ಶಾಸಕರು ಸ್ಪಷ್ಟಪಡಿಸಿದರು.

ಆಕರ್ಷಣೆಗಳು:

ಅನ್ನಸಂತರ್ಪಣೆ: 1 ಲಕ್ಷ ಮಂದಿಗೆ ಅನ್ನದಾನ.

ದೋಸೆಮೇಳ: 50 ಮಂದಿಯ ತಂಡದಿಂದ 80 ಸಾವಿರ ಉದ್ದಿನ ದೋಸೆ ತಯಾರಿ; ಸಂಜೆ 3 ಗಂಟೆಯಿಂದ ವಿತರಣೆ.

ಗೂಡುದೀಪ ಸ್ಪರ್ಧೆ:

ಸೀನಿಯರ್ ವಿಭಾಗ: 1ನೇ ಬಹುಮಾನ ₹7,500

ಜೂನಿಯರ್ ವಿಭಾಗ: 1ನೇ ಬಹುಮಾನ ₹5,000

ಎರಡನೇ ಸ್ಥಾನಿಗಳಿಗೆ ತಲಾ ₹2,500.


ಸನ್ಮಾನ: ಸಂಕಷ್ಟದಲ್ಲೂ ಸೇವೆ ಮಾಡಿದ ಹಾಲು ಮಾರುವವರು, ಬೀಡಿಕಟ್ಟುವವರು ಸೇರಿದಂತೆ 20 ಮಂದಿಗೆ ಸನ್ಮಾನ.


ಸೌಕರ್ಯಗಳು:
ಮಹಾಲಿಂಗೇಶ್ವರ ದೇವಳದ ಬಳಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ಅಲ್ಲಿಂದ ಆಟೋಗಳು ಉಚಿತವಾಗಿ ಪ್ರಯಾಣಿಕರನ್ನು ಕಾರ್ಯಕ್ರಮ ಸ್ಥಳಕ್ಕೆ ಕರೆತರಲಿವೆ. ಸುಮಾರು 1,000 ಸ್ವಯಂಸೇವಕರು ಶಿಸ್ತಿನ ನಿರ್ವಹಣೆಯಲ್ಲಿ ತೊಡಗಿಸಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ, ಸದಸ್ಯರಾದ ಜಯಪ್ರಕಾಶ್ ಬದಿನಾರ್ ಹಾಗೂ ನಿಹಾಲ್ ಶೆಟ್ಟಿ ಹಾಜರಿದ್ದರು.

Leave a Reply

Your email address will not be published. Required fields are marked *

Join WhatsApp Group
error: Content is protected !!