ಮಂಗಳೂರು, ಸೆ.18 : ನಗರದ ಸ್ಟೇಟ್‌ ಬ್ಯಾಂಕ್ ವೃತ್ತದ ಬಳಿ ವ್ಯಕ್ತಿಯೊಬ್ಬರು ಟ್ರಾಫಿಕ್ ಪೊಲೀಸರ ಜೊತೆ ದುರ್ವ್ಯವಹರಿಸಿದ ಘಟನೆ ವಿಡಿಯೋ ರೂಪದಲ್ಲಿ ವೈರಲ್ ಆಗಿದ್ದು, ಪ್ರಕರಣ ದಾಖಲಿಸುವಂತೆ ಪೊಲೀಸ್‌ ಕಮಿಷನರ್‌ ಸುಧೀರ್ ರೆಡ್ಡಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಘಟನೆಯ ವೇಳೆ, ಟ್ರಾಫಿಕ್ ಪೇದೆಯೊಬ್ಬರು ರಸ್ತೆ ದಾಟುತ್ತಿದ್ದ ಮಹಿಳೆಯರಿಗೆ ಸಹಾಯ ಮಾಡಲು ವಾಹನಗಳನ್ನು ತಡೆದು ದಾಟಿಸುತ್ತಿದ್ದರು. ಆ ಸಂದರ್ಭದಲ್ಲಿ ಸ್ಕೂಟರ್ ಸವಾರನೊಬ್ಬ ವೇಗವಾಗಿ ಬಂದು, ಪೊಲೀಸರಿಂದ ನಿಯಂತ್ರಣಕ್ಕೆ ಒಳಗಾದ ಬಳಿಕ ವಾಗ್ವಾದ ಆರಂಭಿಸಿದರು. “ನನ್ನ ಮೇಲೆ ನೀನು ಹೇಗೆ ಕೈ ಹಾಕಿದ್ದೀಯಾ, ಈಗಲೇ ಕ್ಷಮೆ ಕೇಳಬೇಕು” ಎಂದು ಜೋರಾಗಿ ಗದ್ದಲ ಸೃಷ್ಟಿಸಿದ ದೃಶ್ಯವನ್ನು ಅಲ್ಲಿದ್ದವರು ಮೊಬೈಲ್‌ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು.

ವಿಡಿಯೋ ಪೊಲೀಸ್‌ ಕಮಿಷನರ್‌ ಸುಧೀರ್ ರೆಡ್ಡಿ ಅವರ ಗಮನಕ್ಕೆ ಬಂದಿದ್ದು, ಸ್ಥಳದ ಸಿಸಿಟಿವಿ ಪರಿಶೀಲಿಸಿದ ನಂತರ ಪ್ರಕರಣ ದಾಖಲಿಸಲು ಸೂಚನೆ ನೀಡಿದರು. ಅವರು ಸ್ಪಷ್ಟನೆ ನೀಡುತ್ತಾ, “ಪೊಲೀಸರು ಕರ್ತವ್ಯ ನಿರ್ವಹಿಸುವಾಗ ಅವರನ್ನು ಪ್ರಶ್ನಿಸುವ ಅಥವಾ ನಿಂದಿಸುವ ಹಕ್ಕು ಯಾರಿಗೂ ಇಲ್ಲ. ಕಾನೂನು ಉಲ್ಲಂಘನೆ ಕಂಡರೆ ಪೊಲೀಸರಿಗೆ ಕ್ರಮ ಕೈಗೊಳ್ಳಲು ಹಾಗೂ ಅಗತ್ಯವಿದ್ದಲ್ಲಿ ಬಲಪ್ರಯೋಗ ಮಾಡಲು ಅಧಿಕಾರವಿದೆ” ಎಂದು ಎಚ್ಚರಿಸಿದರು.

ಇದೇ ಸಂದರ್ಭದಲ್ಲಿ, “ಮಂಗಳೂರಿನಲ್ಲಿ ಕೆಲವರು ತಾವು ಹೀರೋಗಳೆಂದು ಭಾವಿಸಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸುತ್ತಿದ್ದಾರೆ. ಇಂಥವರ ವಿರುದ್ಧ ಕೂಡಲೇ ಕೇಸು ದಾಖಲಿಸಿದರೆ ಮರುಕಳಿಸುವುದಿಲ್ಲ” ಎಂದು ಹೇಳಿದ್ದಾರೆ. ಪೊಲೀಸರಿಗೆ ಆತ್ಮವಿಶ್ವಾಸ ಕಳೆದುಕೊಳ್ಳದೆ ಕಾನೂನು ಪಾಲನೆಗೇ ಆದ್ಯತೆ ನೀಡಲು ಕಮಿಷನರ್‌ ಕಿವಿಮಾತು ಹೇಳಿದರು.

Leave a Reply

Your email address will not be published. Required fields are marked *

Join WhatsApp Group
error: Content is protected !!