ಹಾಸನ: ಬೇಲೂರಿನ ವರಸಿಧಿ ಗಣಪತಿ ದೇವಾಲಯದೊಳಗಿನ ಗಣೇಶ ಮೂರ್ತಿಗೆ ಚಪ್ಪಲಿ ಹಾರ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಮಹಿಳೆಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಪುರಸಭೆ ಆವರಣದಲ್ಲಿದ್ದ ಗಣೇಶ ಮೂರ್ತಿಗೆ ಮಹಿಳೆ ಚಪ್ಪಲಿ ಹಾರ ಹಾಕಿರುವುದು, ಆಕೆ ದೇವಾಲಯಕ್ಕೆ ಪ್ರವೇಶಿಸಿದುದು ಹಾಗೂ ಹೊರಬಂದಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಆಧಾರದಲ್ಲಿ ಪೊಲೀಸರು ತನಿಖೆ ನಡೆಸಿ, ಹಾಸನದ ವಿಜಯನಗರ ಬಡಾವಣೆ ನಿವಾಸಿ ಲೀಲಮ್ಮ ಎಂಬ ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ.

ಗುಡ್ಡೇನಹಳ್ಳಿ ಬಳಿ ಲೀಲಮ್ಮರನ್ನು ಬಾಣಾವರ ಪಿಎಸ್‌ಐ ಸುರೇಶ್ ನೇತೃತ್ವದ ತಂಡ ಬಂಧಿಸಿದ್ದು, ವಿಚಾರಣೆ ಮುಂದುವರಿಸಿದೆ.

ಈ ಸಂಬಂಧ ಹಾಸನ ಎಸ್‌ಪಿ ಮೊಹಮ್ಮದ್ ಸುಜೀತಾ ಮಾಧ್ಯಮಗಳಿಗೆ ನೀಡಿದ ಮಾಹಿತಿಯಲ್ಲಿ – ಲೀಲಮ್ಮ ಮಾನಸಿಕ ಅಸ್ಥಿರತೆಯಿಂದ ಬಳಲುತ್ತಿರುವ ಸಾಧ್ಯತೆ ಇದೆ. ಸೆಪ್ಟೆಂಬರ್ 21ರ ರಾತ್ರಿ 8.30ರ ಸುಮಾರಿಗೆ ಹಾಸನದಿಂದ ಬೇಲೂರು ಕಡೆ ಬಸ್ ಹತ್ತಿ, ಬಳಿಕ ಚಿಕ್ಕಮಗಳೂರು ಹೋಗಿ ಮರುಬಾರಿ ಬೇಲೂರಿಗೆ ಬಂದು ದೇವಾಲಯದತ್ತ ತೆರಳಿದ್ದಾಳೆ. ಈ ಎಲ್ಲಾ ಚಲನವಲನ ಸಿಸಿಟಿವಿಯಲ್ಲಿ ದಾಖಲಾಗಿದೆ ಎಂದು ತಿಳಿಸಿದರು.

ಘಟನೆಯ ಬಳಿಕ ಮಹಿಳೆ ಹಾಸನಕ್ಕೆ ಮರಳಿದ್ದಾಳೆ. ವಿಜಯನಗರದಲ್ಲಿರುವ ಮನೆ ಬಳಿ ಅವರನ್ನು ವಶಕ್ಕೆ ಪಡೆಯಲಾಗಿದೆ. ಸದ್ಯಕ್ಕೆ ವೈದ್ಯಕೀಯ ಪರೀಕ್ಷೆ ಅಗತ್ಯವಿದ್ದು, ಮುಂದಿನ ತನಿಖೆ ನಡೆಯುತ್ತಿದೆ. ಲೀಲಮ್ಮ ಮನೆಮಟ್ಟದಲ್ಲೂ ಈ ರೀತಿಯ ವರ್ತನೆ ನಡೆಸಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ಎಸ್‌ಪಿ ಹೇಳಿದರು.

Leave a Reply

Your email address will not be published. Required fields are marked *

Join WhatsApp Group
error: Content is protected !!