
ಪುತ್ತೂರು: ಪುತ್ತೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದನ ಸಾಗಾಟ ಪ್ರಕರಣ ಬೆಳಕಿಗೆ ಬಂದಿದೆ.ಸೆಪ್ಟೆಂಬರ್ 20ರಂದು ಆಂಜನೇಯ ರೆಡ್ಡಿ ಜಿ.ವಿ ಪಿಎಸ್ಐ ಹಾಗೂ ಸಿಬ್ಬಂದಿಗಳು ಬೈಪಾಸ್ ರಸ್ತೆಯಲ್ಲಿ ಗಸ್ತು ಹೊಡೆಯುತ್ತಿದ್ದ ವೇಳೆ, ಸಂಪ್ಯ ಕಡೆಯಿಂದ ಕಬಕ ಕಡೆಗೆ ಬರುತ್ತಿದ್ದ ಕೆಎ 21-ಎ-9877 ನೇ ಪಿಕಪ್ ವಾಹನವನ್ನು ಪರ್ಲಡ್ಕದ ಬಳಿ ತಪಾಸಣೆ ನಡೆಸಿದರು.
ವಾಹನದ ಒಳಗೆ ಒಂದು ದನವನ್ನು ಕಟ್ಟಿ ಸಾಗಿಸುತ್ತಿರುವುದು ಪತ್ತೆಯಾದ್ದರಿಂದ, ಚಾಲಕರಲ್ಲಿ ಪರವಾನಿಗೆ ಕುರಿತು ವಿಚಾರಿಸಿದಾಗ ಯಾವುದೇ ಪರವಾನಿಗೆ ಇಲ್ಲ ಎಂದು ತಿಳಿದುಬಂತು. ಚಾಲಕ ನೀಡಿದ ಮಾಹಿತಿಯ ಪ್ರಕಾರ, ದನವನ್ನು ಪೂವಪ್ಪ (ತಿಂಗಳಾಡಿ ಗಟ್ಟ ಮನೆ, ಪುತ್ತೂರು) ಎಂಬವರಿಂದ ₹17,000ಕ್ಕೆ ಖರೀದಿಸಲಾಗಿದ್ದು, ಕೆದಿಲದ ಮನೆಯಲ್ಲಿ ವಧೆ ಮಾಡಿ ಮಾಂಸ ಮಾರಾಟ ಮಾಡುವ ಉದ್ದೇಶದಿಂದ ಸಾಗಾಟ ಮಾಡಲಾಗುತ್ತಿತ್ತು.
ಪೊಲೀಸರು ದನವನ್ನು ರಕ್ಷಣೆಗಾಗಿ ಠಾಣೆಗೆ ಕರೆದುಕೊಂಡು ಬಂದು, ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ 82/2025ರಂತೆ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ 2020ರ ಕಲಂ 4, 5, 12 ಹಾಗೂ ಐಎಂವಿ ಕಾಯ್ದೆಯ ಕಲಂ 66, 192(A) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆರೋಪಿಗಳು:
1. ಅಬ್ದುಲ್ ಕರೀಂ (38), ಕೆದಿಲ ಗ್ರಾಮ, ಬಂಟ್ವಾಳ ತಾಲೂಕು
2. ಅಬ್ದುಲ್ ಜಮೀರ್ (27), ಕೆದಿಲ ಗ್ರಾಮ, ಬಂಟ್ವಾಳ ತಾಲೂಕು
3. ಪೂವಪ್ಪ, ತಿಂಗಳಾಡಿ ಗಟ್ಟ ಮನೆ, ಪುತ್ತೂರು ತಾಲೂಕು
ತನಿಖೆ ಮುಂದುವರಿದಿದೆ.





