
ಉಡುಪಿ: ಸುಳ್ಳು ಆರೋಪಗಳಿಂದ ಮನನೊಂದು ವ್ಯಕ್ತಿಯೊಬ್ಬರು ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿರುವ ದುರ್ಘಟನೆ ಕಟಪಾಡಿ ಸಮೀಪದ ಸುಭಾಷ್ ನಗರದಲ್ಲಿ ಭಾನುವಾರ ರಾತ್ರಿ ನಡೆದಿದೆ.
ಮೃತ ದುರ್ದೈವಿ ಸುಭಾಷ್ ನಗರ ನಿವಾಸಿ ಶೇಕ್ ಅಬ್ದುಲ್ಲಾ (38). ಆತ್ಮಹತ್ಯೆಗೆ ಮೊದಲು ಅಬ್ದುಲ್ಲಾ ಮಾಡಿದ ವಿಡಿಯೋದಲ್ಲಿ ಮಿಸಾಲ್, ಮಿಸಾಲ್‌ನ ತಾಯಿ ಹಾಗೂ ತಂಗಿಯೇ ತನ್ನ ಸಾವಿಗೆ ಕಾರಣವೆಂದು ಆರೋಪಿಸಿರುವುದು ಬೆಳಕಿಗೆ ಬಂದಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮೃತನ ಸಹೋದರ ನೀಡಿದ ದೂರಿನಂತೆ “ತಮ್ಮನ ಸಾವಿಗೆ ಈ ಮೂವರು ಮಾಡಿರುವ ಸುಳ್ಳು ಆರೋಪವೇ ಕಾರಣ” ಎಂದು ತಿಳಿಸಲಾಗಿದ್ದು, ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.






