
ಮಂಗಳೂರು: ನಗರದ ಸಿಸಿಬಿ ಘಟಕದ ಪೊಲೀಸರು ಎರಡು ಪ್ರತ್ಯೇಕ ದಾಳಿಗಳಲ್ಲಿ ಒಟ್ಟು 6 ಮಂದಿಯನ್ನು ಬಂಧಿಸಿ, ರೂ. 24.20 ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಸೆಪ್ಟೆಂಬರ್ 21ರಂದು ಬೆಳಿಗ್ಗೆ ಕಾವೂರಿನ ಗಾಂಧಿನಗರದ ಮಲ್ಲಿ ಲೇಔಟ್‌ನಲ್ಲಿ ನಡೆಸಿದ ದಾಳಿಯಲ್ಲಿ, ಸ್ಕೂಟರ್‌ನಲ್ಲಿ ಮಾದಕ ವಸ್ತು ಸಾಗಿಸುತ್ತಿದ್ದ ಚಿರಾಗ್ ಸನಿಲ್ ಮತ್ತು ಆಲ್ವಿನ್ ಕ್ಲಿಂಟನ್ ಡಿ’ಸೋಜಾ ಬಂಧಿತರಾಗಿದ್ದು, ಅವರಿಂದ 111.83 ಗ್ರಾಂ ಎಂಡಿಎಂಎ (ಮೌಲ್ಯ ರೂ. 22.30 ಲಕ್ಷ) ವಶಪಡಿಸಿಕೊಳ್ಳಲಾಗಿದೆ. ವಿಚಾರಣೆ ವೇಳೆ, ಆರೋಪಿಗಳು ಮುಂಬೈ ಮೂಲದ ಆಫ್ರಿಕನ್ ಪ್ರಜೆ ಬೆಂಜಮಿನ್ರಿಂದ ಕೇರಳದ ಅಬ್ದುಲ್ ಕರೀಂ ಇ.ಕೆ ನೀಡಿದ ಹಣದ ಮೂಲಕ ವಸ್ತು ಖರೀದಿಸಿದ್ದಾಗಿ ಒಪ್ಪಿಕೊಂಡಿದ್ದಾರೆ. ನಂತರ, ಸೆ.22ರಂದು ಅಬ್ದುಲ್ ಕರೀಂನನ್ನೂ ಮಂಗಳೂರು ರೈಲು ನಿಲ್ದಾಣದ ಬಳಿ ಪೊಲೀಸರು ಬಂಧಿಸಿದರು.
ಇದೇ ದಿನ ರಾತ್ರಿ 8.45ರ ಸುಮಾರಿಗೆ, ಮಣ್ಣಗುಡ್ಡೆಯ ಸೆಂಟ್ರಲ್ ವೇರ್‌ಹೌಸ್ ಬಳಿ ಮತ್ತೊಂದು ದಾಳಿ ನಡೆಸಿದ ಪೊಲೀಸರು, ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಜನನ್ ಜಗನ್ನಾಥ, ರಾಜೇಶ್ ಬಂಗೇರ ಮತ್ತು ವರುಣ್ ಗಾಣಿಗರನ್ನು ವಶಕ್ಕೆ ಪಡೆದು, ಅವರಿಂದ 21.03 ಗ್ರಾಂ ಕೊಕೇನ್ (ಮೌಲ್ಯ ರೂ. 1.90 ಲಕ್ಷ) ವಶಪಡಿಸಿಕೊಂಡಿದ್ದಾರೆ.
ಬಂಧಿತರು:
1. ಚಿರಾಗ್ ಸನಿಲ್, ಕಾವೂರು
2. ಆಲ್ವಿನ್ ಕ್ಲಿಂಟನ್ ಡಿ’ಸೋಜಾ, ಅಶೋಕನಗರ
3. ಅಬ್ದುಲ್ ಕರೀಂ ಇ.ಕೆ (52), ಕೇರಳ, ಮಲ್ಲಾಪ್ಪುರಂ
4. ಜನನ್ ಜಗನ್ನಾಥ (28), ಕುಲಶೇಖರ
5. ರಾಜೇಶ್ ಬಂಗೇರ (30), ಬೋಳೂರು
6. ವರುಣ್ ಗಾಣಿಗ (28), ಅಶೋಕನಗರ
ಬಂಧಿತ ಆರೋಪಿಗಳ ವಿರುದ್ಧ ಕಾವೂರು ಠಾಣೆಯಲ್ಲಿ ಅ.ಕ್ರ.143/2025 ಮತ್ತು ಬರ್ಕೆ ಠಾಣೆಯಲ್ಲಿ ಅ.ಕ್ರ.97/2025 ಪ್ರಕರಣಗಳು NDPS ಕಾಯ್ದೆಯ ವಿವಿಧ ಕಲಂಗಳು ಅಡಿಯಲ್ಲಿ ದಾಖಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪೊಲೀಸರು ಇನ್ನಷ್ಟು ಪೆಡ್ಲರ್‌ಗಳು ಹಾಗೂ ಮಾದಕ ವಸ್ತು ಬಳಕೆದಾರರ ಜಾಲವನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ತನಿಖೆ ಮುಂದುವರೆಸಿದ್ದಾರೆ ಎಂದು ಮಂಗಳೂರು ನಗರದ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.






