ಮಂಗಳೂರು: ನಗರದ ಚಾಯ್ಸ್ ಗೋಲ್ಡ್ ಅಂಗಡಿಯ ಕೆಲಸಗಾರನನ್ನು ಅಪಹರಿಸಿ ಚಿನ್ನದ ಗಟ್ಟಿಯನ್ನು ದರೋಡೆ ಮಾಡಿದ ಪ್ರಕರಣದಲ್ಲಿ ಮಂಗಳೂರು ಪೊಲೀಸರು 5 ಮಂದಿಯನ್ನು ಸೆಪ್ಟೆಂಬರ್ 29ರಂದು ದಸ್ತಗಿರಿ ಮಾಡಿದ್ದಾರೆ.
ಸೆಪ್ಟೆಂಬರ್ 26ರಂದು ರಾತ್ರಿ 8.45ರ ಸುಮಾರಿಗೆ, ಚಾಯ್ಸ್ ಗೋಲ್ಡ್ ಅಂಗಡಿಯ ಕೆಲಸಗಾರ ಮುಸ್ತಾಫ ಅವರು ತಮ್ಮ ಸ್ಕೂಟರ್ (KA-19EZ-2079)ನಲ್ಲಿ ಚಿನ್ನದ ಗಟ್ಟಿಯನ್ನು ಹೊತ್ತೊಯ್ಯುತ್ತಿದ್ದಾಗ ಕಾರ್ ಸ್ಟ್ರೀಟ್ ವೆಂಕಟರಮಣ ದೇವಸ್ಥಾನದ ಎದುರಿನ ರಸ್ತೆಯಲ್ಲಿ ಆರೋಪಿಗಳು ಮಾರ್ಗ ತಡೆದು ನಿಲ್ಲಿಸಿ, ನಂತರ ಕಾರಿನಲ್ಲಿ ಅಪಹರಿಸಿಕೊಂಡು ಹೋಗಿ ಹಲ್ಲೆ ನಡೆಸಿ ಮಂಗಳೂರು ಎಕ್ಕೂರು ಬಳಿ ಇಳಿಸಿ, ಚಿನ್ನದ ಗಟ್ಟಿಯನ್ನು ದರೋಡೆ ಮಾಡಿಕೊಂಡು ಪರಾರಿಯಾದ ಘಟನೆ ನಡೆದಿತ್ತು.
ಬಂಧಿತರ ವಿವರ:
ಫಾರಿಶ್ (18), ವಾಸ: ಕೋಟೆಕಾರು
ಸಫ್ವಾನ್ (23), ವಾಸ: ಉಳ್ಳಾಲ
ಅರಾಫತ್ ಆಲಿ (18), ವಾಸ: ಉಳ್ಳಾಲ
ಫರಾಝ್ (19), ವಾಸ: ಉಳ್ಳಾಲ ದರ್ಗಾ ಹತ್ತಿರ
ಕಾನೂನು ಸಂಘರ್ಷಕ್ಕೊಳಗಾದ ಬಾಲಕ
ಹಿನ್ನೆಲೆ:
ಚಾಯ್ಸ್ ಗೋಲ್ಡ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ಬಾಲಕನು, ಮುಸ್ತಾಫ ಚಿನ್ನದ ಗಟ್ಟಿಯನ್ನು ಹೊತ್ತೊಯ್ಯುವ ಮಾಹಿತಿಯನ್ನು ಹಿಂದಿನ ಉದ್ಯೋಗಿ ಫಾರಿಶ್‌ಗೆ ನೀಡಿದ್ದ. ಫಾರಿಶ್ ಹಾಗೂ ಇತರರು ಪೂರ್ವಯೋಜಿತ ಸಂಚು ರೂಪಿಸಿ ದರೋಡೆಗೆ ಮುಂದಾಗಿದ್ದರು. ಈ ಘಟನೆಯಲ್ಲಿ ಸಫ್ವಾನ್ ಕಾರನ್ನು ಒದಗಿಸಿದ್ದನು. ಅರಾಫತ್ ಆಲಿ ಮತ್ತು ಫರಾಝ್ ಸ್ಕೂಟರ್‌ನಲ್ಲಿ ಬಂದು ಮುಸ್ತಾಫ ಅವರನ್ನು ಅಡ್ಡಗಟ್ಟಿ, ಬಳಿಕ ಉಳಿದವರು ಕಾರಿನಲ್ಲಿ ಅಪಹರಿಸಿದ್ದರು.
ಪೊಲೀಸರ ಕಾರ್ಯಾಚರಣೆ:
ಘಟನೆಯಲ್ಲಿ ಬಳಸಿದ KA-19HT-8545 ಸುಜುಕಿ ಆಕ್ಸೆಸ್ ಸ್ಕೂಟರ್ ಅನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಆದರೆ, ಕಾರು ಹಾಗೂ ದರೋಡೆ ಮಾಡಿದ ಚಿನ್ನದ ಗಟ್ಟಿಯನ್ನು ಪತ್ತೆಹಚ್ಚುವ ಕಾರ್ಯ ಮುಂದುವರಿದಿದೆ.
ಈ ಪ್ರಕರಣವನ್ನು ಮಂಗಳೂರು ನಗರ ಉಪ ಪೊಲೀಸ್ ಆಯುಕ್ತರು (ಅಪರಾಧ ಮತ್ತು ಸಂಚಾರ), ಸಹಾಯಕ ಪೊಲೀಸ್ ಆಯುಕ್ತರು (ಕೇಂದ್ರ ಉಪವಿಭಾಗ), ಸಿಸಿಬಿ ಘಟಕದ ಮಾರ್ಗದರ್ಶನದಲ್ಲಿ ಮಂಗಳೂರು ಉತ್ತರ ಠಾಣೆ ಹಾಗೂ ಸಿಸಿಬಿ ಘಟಕದ ತಂಡ ಜಂಟಿಯಾಗಿ ಯಶಸ್ವಿಯಾಗಿ ಬಂಧನ ನಡೆಸಿದೆ.














