
ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ನಡೆದ ಚಿನ್ನದ ಕಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಕೇವಲ 24 ಗಂಟೆಯೊಳಗೆ ಆರೋಪಿತೆಯನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.
ಸೆ. 26ರಂದು ರಾತ್ರಿ 8:50ರ ಸುಮಾರಿಗೆ ದೇವಿಪ್ರಿಯಾ ಎಂಬ ಭಕ್ತಿಯ ಬ್ಯಾಗ್‌ನ ಜಿಪ್ ತೆರೆಯಲಾಗಿದ್ದು, ಅದರಲ್ಲಿ ಇಟ್ಟುಕೊಂಡಿದ್ದ ಸುಮಾರು 3 ಪವನ್ ತೂಕದ ಚಿನ್ನದ ಸರ ಕಳವಾಗಿತ್ತು. ಇದರ ಮೌಲ್ಯ ಅಂದಾಜು ರೂ. 2.5 ಲಕ್ಷ. ಈ ಸಂಬಂಧ ಭಕ್ತಿಯಿಂದ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಕುಂದಾಪುರ ಉಪವಿಭಾಗದ ಡಿವೈಎಸ್ಪಿ ಹೆಚ್.ಡಿ. ಕುಲಕರ್ಣಿ ಹಾಗೂ ಬೈಂದೂರು ವೃತ್ತ ನಿರೀಕ್ಷಕ ನೀಲೇಶ್ ಚೌಹಾಣ್ ಅವರ ಮಾರ್ಗದರ್ಶನದಲ್ಲಿ, ಕೊಲ್ಲೂರು ಠಾಣಾ ಉಪನಿರೀಕ್ಷಕ ವಿನಯ್ ಎಂ. ಕೊರ್ಲಹಳ್ಳಿ ನೇತೃತ್ವದ ಪೊಲೀಸರು ಸಿಸಿಟಿವಿ ದೃಶ್ಯಗಳು ಮತ್ತು ತಾಂತ್ರಿಕ ಮಾಹಿತಿಗಳ ಆಧಾರದ ಮೇಲೆ ತನಿಖೆ ಮುಂದುವರಿಸಿದರು.
ಅಂತಿಮವಾಗಿ, ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ಆರೋಪಿ ಯಾಧವ ದುರ್ಗಮ್ಮ ಅವರನ್ನು ಬಂಧಿಸಿ, ಕಳವು ಮಾಡಿದ 3 ಪವನ್ ಚಿನ್ನದ ಸರವನ್ನು ವಶಕ್ಕೆ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.






