
ಮಂಗಳೂರು, ಅ.5:ಅನೇಕ ವರ್ಷಗಳಿಂದ ತಲೆಮರೆಸಿಕೊಂಡಿದ್ದ ಭೂಗತ ಪಾತಕಿ ಕಲಿ ಯೋಗೀಶ್‌ನ ಸಹಚರ ಶ್ರೀನಿವಾಸ್ ಶೆಟ್ಟಿ @ ಶೀನು (45) ಅವರನ್ನು ಮುಲ್ಕಿ ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯ ಮುಲ್ಕಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಅ.ಕ್ರ 155/2017 ಹಾಗೂ ಕೋಕಾ ಪ್ರಕರಣದಲ್ಲಿ ಆರೋಪಿಯಾಗಿದ್ದ ಶೀನು, ಸುಮಾರು 8 ವರ್ಷಗಳಿಂದ ದಸ್ತಗಿರಿಗೆ ಸಿಗದೆ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದನು. ಇದರಿಂದ ಮಾನ್ಯ ಮೈಸೂರು ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದಿಂದ ವಾರೆಂಟ್ ಹಾಗೂ ಉದ್ಘೋಷಣೆ ಹೊರಡಿಸಲಾಗಿತ್ತು.
ಮಂಗಳೂರು ಉತ್ತರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶ್ರೀಕಾಂತ್ ಅವರ ಮಾರ್ಗದರ್ಶನದಲ್ಲಿ, ಮುಲ್ಕಿ ಪೊಲೀಸ್ ಠಾಣೆಯ ಪಿಐ ಮಂಜುನಾಥ ಬಿ.ಎಸ್, ಪಿಎಸ್ಐ ಉಮೇಶ್ ಕುಮಾರ್ ಎಂ.ಎನ್, ಎಎಸ್ಐ ಸುರೇಶ್ ಕುಂದರ್, ಹೆಡ್ ಕಾನ್ಸ್ಟೇಬಲ್ ಉದಯ ರವರನ್ನೊಳಗೊಂಡ ತಂಡವು ಶೀನು ತಲೆಮರೆಸಿಕೊಂಡಿರುವ ಬಗ್ಗೆ ಮಾಹಿತಿ ಸಂಗ್ರಹಿಸಿತು. ಬಳಿಕ ಆತ ಮುಂಬೈಯಲ್ಲಿ ಇರುವ ಬಗ್ಗೆ ಖಚಿತ ಮಾಹಿತಿ ದೊರಕಿದ ಹಿನ್ನೆಲೆಯಲ್ಲಿ ಅ.4ರಂದು ದಸ್ತಗಿರಿ ಮಾಡಲಾಯಿತು.
ಬಂಧಿತನನ್ನು ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.






