ಪುತ್ತೂರು: ಕೇಂದ್ರ ವಿಪಕ್ಷ ನಾಯಕ ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ಮತ ಕಳ್ಳತನ ವಿರೋಧಿ ಆಂದೋಲನದ ಅಂಗವಾಗಿ ಪುತ್ತೂರು, ವಿಟ್ಲ ಮತ್ತು ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ ಬೂತ್ ಲೆವೆಲ್ ಏಜೆಂಟ್‌ಗಳಿಗೆ (ಬಿಎಲ್‌ಎ) ತರಬೇತಿ ಕಾರ್ಯಾಗಾರ ಭಾನುವಾರ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸಭಾಭವನದಲ್ಲಿ ಜರುಗಿತು.

ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಅವರು, “ಬೂತ್ ಮಟ್ಟದಲ್ಲಿ ಬಿಎಲ್‌ಎಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಿದರೆ ಬಿಜೆಪಿ ಮತ ಕಳ್ಳತನ ತಡೆಯಲು ಸಾಧ್ಯ. ಅರ್ಹರನ್ನು ಮತದಾರರ ಪಟ್ಟಿಗೆ ಸೇರಿಸುವುದು, ಬೋಗಸ್‌ ಮತದಾರರನ್ನು ಡಿಲೀಟ್ ಮಾಡುವುದು ಬಿಎಲ್‌ಎಗಳ ಪ್ರಮುಖ ಕರ್ತವ್ಯ. ತರಬೇತಿ ಪಡೆದಾಗ ಮಾತ್ರ ಚುನಾವಣೆ ಪ್ರಕ್ರಿಯೆಗೆ ಸಮರ್ಪಕವಾಗಿ ತಕ್ಕಮಟ್ಟಿನ ಪ್ರತಿಕ್ರಿಯೆ ನೀಡಬಹುದು” ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಸಕ ಅಶೋಕ್ ಕುಮಾರ್ ರೈ ಅವರು, “ಬಿಎಲ್‌ಎಗಳು ಮುಂಬರುವ ಚುನಾವಣೆಗೆ ಮಾತ್ರ ಸೀಮಿತವಾಗದೆ ಮುಂದಿನ ಹತ್ತು ವರ್ಷಗಳ ಕಾಲ ಬೂತ್ ಮಟ್ಟದಲ್ಲಿ ಸಕ್ರೀಯವಾಗಿರಬೇಕು. ಜವಾಬ್ದಾರಿ ಪಡೆದ ಬಳಿಕ ಸಮಯ ಕೊಟ್ಟು ಕರ್ತವ್ಯ ನಿರ್ವಹಿಸಬೇಕು. ಆಗದಿದ್ದರೆ ಬಿಡಬೇಕು. ತಂತ್ರಜ್ಞಾನವನ್ನು ಬಳಸಿಕೊಂಡು ತಾಂತ್ರಿಕವಾಗಿ ಮುನ್ನಡೆಯಬೇಕು, ಆಗ ಚುನಾವಣೆ ಗೆಲ್ಲುವುದು ಸುಲಭವಾಗುತ್ತದೆ” ಎಂದು ಹೇಳಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್. ಮಹಮ್ಮದ್, ಜಿಲ್ಲಾ ಉಸ್ತುವಾರಿ ಚಿತ್ತರಂಜನ್ ಶೆಟ್ಟಿ, ಸಂಯೋಜಕ ಹೇಮನಾಥ ಶೆಟ್ಟಿ ಕಾವು, ಕೌಶಲ್ ಪ್ರಸಾದ್ ಶೆಟ್ಟಿ, ಶಶಿಕಿರಣ್ ರೈ ನೂಜಿಬೈಲು, ಉಷಾ ಅಂಚನ್, ಸುಭೋದಯ ಅಳ್ವ, ಮನೋರಾಜ್, ಅನಿತಾ ಹೇಮನಾಥ ಶೆಟ್ಟಿ, ಎ.ಎಂ. ಪ್ರವೀಣಚಂದ್ರ ಆಳ್ವ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್‌ ಆಳ್ವ ಸ್ವಾಗತಿಸಿದರು. ವಿಟ್ಲ ಬ್ಲಾಕ್ ಅಧ್ಯಕ್ಷ ಪದ್ಮನಾಭ ಪೂಜಾರಿ ವಂದಿಸಿದರು. ಮಹಮ್ಮದ್ ಬಡಗನ್ನೂರು ನಿರೂಪಣೆ ನಡೆಸಿದರು.

ಪುತ್ತೂರು ಕ್ಷೇತ್ರದ 224 ಬೂತ್‌ ಏಜೆಂಟ್‌ಗಳು ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡರು.


Leave a Reply

Your email address will not be published. Required fields are marked *

Join WhatsApp Group
error: Content is protected !!