
ಸಿರ್ಮೌರ್ (ಹಿಮಾಚಲ ಪ್ರದೇಶ): ಸರ್ಕಾರಿ ಶಾಲಾ ಶಿಕ್ಷಕರೊಬ್ಬರು ಬರೆದ ಚೆಕ್‌ನ ಕಾಗುಣಿತ ದೋಷ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ, ಅವರ ವಿರುದ್ಧ ಶಿಕ್ಷಣ ಇಲಾಖೆ ಗಂಭೀರ ಕ್ರಮ ಕೈಗೊಂಡಿದೆ.
ರೋಹ್ನಾಟ್ ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆಯ ಚಿತ್ರಕಲಾ ಶಿಕ್ಷಕ ಅಟ್ಟರ್ ಸಿಂಗ್ ಅವರು ಸೆಪ್ಟೆಂಬರ್ 25ರಂದು ನೀಡಿದ ₹7,616ರ ಚೆಕ್‌ನಲ್ಲಿ “Saven Thursday Six Harendra Sixtey” ಎಂದು ತಪ್ಪಾಗಿ ಬರೆದು ಸಾರ್ವಜನಿಕರ ಅಪಹಾಸ್ಯಕ್ಕೆ ಗುರಿಯಾಗಿದ್ದರು.
ಈ ವಿಷಯ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಡುತ್ತಿದ್ದಂತೆ ಶಾಲಾ ಶಿಕ್ಷಣ ನಿರ್ದೇಶನಾಲಯ ಶಿಕ್ಷಕರನ್ನು ಅಮಾನತುಗೊಳಿಸಿದೆ. ಜೊತೆಗೆ ಪ್ರಾಂಶುಪಾಲರು ಹಾಗೂ ಸಂಬಂಧಿಸಿದ ಅಧಿಕಾರಿಗಳಿಂದ ವಿವರಣೆ ಕೇಳಲಾಗಿದೆ.
ಶಾಲಾ ಶಿಕ್ಷಣ ನಿರ್ದೇಶಕ ಆಶಿಷ್ ಕೊಹ್ಲಿ ಅವರು, “ಇಲಾಖೆಯ ಪ್ರತಿಷ್ಠೆಗೆ ಧಕ್ಕೆಯುಂಟುಮಾಡುವ ಯಾವುದೇ ನಿರ್ಲಕ್ಷ್ಯ ಕಠಿಣ ಶಿಸ್ತು ಕ್ರಮಕ್ಕೆ ಕಾರಣವಾಗುತ್ತದೆ” ಎಂದು ಎಚ್ಚರಿಕೆ ನೀಡಿದ್ದಾರೆ.
ಕೇಂದ್ರ ನಾಗರಿಕ ಸೇವಾ ನಿಯಮಾವಳಿ (1965) ಅಡಿಯಲ್ಲಿ ಶಿಕ್ಷಕರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಸೂಚನೆ ನೀಡಲಾಗಿದ್ದು, ಇದರ ವರದಿಯನ್ನು ಶೀಘ್ರದಲ್ಲೇ ಸಲ್ಲಿಸುವಂತೆ ಉಪನಿರ್ದೇಶಕರಿಗೆ ಆದೇಶಿಸಲಾಗಿದೆ.
ಹಣಕಾಸು ಹಾಗೂ ಅಧಿಕೃತ ದಾಖಲೆಗಳನ್ನು ಸಿದ್ಧಪಡಿಸುವಾಗ ನಿಖರತೆ ಮತ್ತು ಆಡಳಿತಾತ್ಮಕ ಜವಾಬ್ದಾರಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ನಿರ್ದೇಶನಾಲಯ ಸ್ಪಷ್ಟಪಡಿಸಿದೆ.






