
ಉಡುಪಿ, ಅ.6: ಶಾಲಾ ಹಾಗೂ ಕಾಲೇಜು ಬಸ್‌ಗಳಿಗೆ ನಕಲಿ ವಿಮೆ ಪಾಲಿಸಿ ಮಾಡಿಸಿ ಕೋಟ್ಯಂತರ ರೂಪಾಯಿ ವಂಚನೆ ನಡೆಸಿದ ಪ್ರಕರಣವನ್ನು ಉಡುಪಿ ಪೊಲೀಸರು ಬಯಲಿಗೆಳೆದಿದ್ದಾರೆ. ಈ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಅವರು ಎಸ್ಪಿ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಬಂಧಿತರು
ಸಾಸ್ತಾನ ಕುಂಜಿಕೆರೆ ರಸ್ತೆಯ ರಾಕೇಶ್ ಎಸ್. (33) ಹಾಗೂ ಶಿರಸಿಯ ಚರಣ ಬಾಬು ಮೇಸ್ತ ಬಂಧಿತರು. ಇವರು ನಕಲಿ ವಿಮೆ ಪಾಲಿಸಿ ಸೃಷ್ಟಿಸಿ ಶಾಲಾ-ಕಾಲೇಜು ಬಸ್‌ಗಳಿಗೆ ನೀಡಿದ್ದು, ವಿಮಾ ಕಂಪೆನಿಗಳಿಗೆ ಕೋಟ್ಯಂತರ ರೂ. ವಂಚನೆ ಮಾಡಿದ್ದಾರೆ ಎಂದು ಎಸ್ಪಿ ಹೇಳಿದರು.
ಅಪಘಾತದಿಂದ ಪ್ರಕರಣ ಬೆಳಕಿಗೆ
2024ರ ನವೆಂಬರ್ 25ರಂದು ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಹುಣ್ಣೆಮಕ್ಕಿ ಗ್ರಾಮದಲ್ಲಿ ಶಾಲಾ ಬಸ್ಸೊಂದು ರಿಕ್ಷಾಕ್ಕೆ ಢಿಕ್ಕಿ ಹೊಡೆದಿತ್ತು. ಈ ಪ್ರಕರಣದಲ್ಲಿ ರಿಕ್ಷಾ ಚಾಲಕ ವಿಮಾ ಪರಿಹಾರವಾಗಿ 15.95 ಲಕ್ಷ ರೂ. ಬೇಡಿಕೆ ಇಟ್ಟಿದ್ದಾಗ ವಿಮಾ ಕಂಪೆನಿ ಪರಿಶೀಲನೆ ವೇಳೆ ಬಸ್‌ನ ವಿಮೆ ಪಾಲಿಸಿ ನಕಲಿ ಎನ್ನುವುದು ಪತ್ತೆಯಾಯಿತು.
ರಿಲಯನ್ಸ್ ಜನರಲ್ ಇನ್ಸೂರೆನ್ಸ್ ಕಂಪೆನಿಯ ಮ್ಯಾನೇಜರ್ ದೂರು ಆಧರಿಸಿ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬ್ರಹ್ಮಾವರ ವೃತ್ತ ನಿರೀಕ್ಷಕ ಗೋಪಿಕೃಷ್ಣ ನೇತೃತ್ವದ ವಿಶೇಷ ತಂಡ ತನಿಖೆ ನಡೆಸಿ ವಂಚನೆ ಬಯಲಿಗೆಳೆಯಿತು.
ಶಾಲಾ ಬಸ್‌ಗಳೇ ಗುರಿ
ಸೆ.6ರಂದು ರಾಕೇಶ್ ಬಂಧನಕ್ಕೊಳಗಾದ ನಂತರ ವಿಚಾರಣೆಯಲ್ಲಿ, ಆತ ತನ್ನ ಹಳೆಯ ಸಹೋದ್ಯೋಗಿ ಚರಣ ಬಾಬು ಮೇಸ್ತ (ಮಾಜಿ ಎಸ್‌ಡಿಓ, ರಿಲಯನ್ಸ್ ಇನ್ಸೂರೆನ್ಸ್) ಜೊತೆ ಸೇರಿಕೊಂಡು ಉಡುಪಿ, ಕುಂದಾಪುರ, ಕೋಟ, ಶಿರೂರು, ಭಟ್ಕಳ ವ್ಯಾಪ್ತಿಯ ಶಾಲಾ-ಕಾಲೇಜು ಬಸ್ಸುಗಳಿಗೆ ನಕಲಿ ವಿಮೆ ಮಾಡಿಸಿ ಹಣ ವಂಚನೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.
ಪೊಲೀಸರು ಚರಣ ಬಾಬುವನ್ನು ಅ.3ರಂದು ಬಂಧಿಸಿದ್ದು, ಇಬ್ಬರ ವಿರುದ್ಧವೂ ಹೆಚ್ಚಿನ ತನಿಖೆ ನಡೆಯುತ್ತಿದೆ.
46 ಶಾಲಾ-ಕಾಲೇಜು ಬಸ್‌ಗಳಿಗೆ ನಕಲಿ ವಿಮೆ
ತನಿಖೆಯಲ್ಲಿ, ಆರೋಪಿಗಳು ಒಟ್ಟಾರೆ 197 ಪಾಲಿಸಿ ಮಾಡಿಸಿದ್ದು, ಅದರಲ್ಲಿ 46 ಶಾಲಾ/ಕಾಲೇಜು ವಾಹನಗಳ ವಿಮೆ ಪಾಲಿಸಿಗಳು ನಕಲಿ ಎನ್ನುವುದು ಪತ್ತೆಯಾಗಿದೆ. ಹಳೆಯ ವಿಮೆ ಪಿಡಿಎಫ್‌ಗಳನ್ನು ಸಂಪಾದಿಸಿ, ವಾಹನದ ವಿವರ, ದಿನಾಂಕ, ಮೊತ್ತ ಇತ್ಯಾದಿಗಳನ್ನು ಬದಲಿಸಿ ನಕಲಿ ಪಾಲಿಸಿ ಸೃಷ್ಟಿಸಿ ಶಾಲಾ-ಕಾಲೇಜುಗಳಿಗೆ ಕಳುಹಿಸಿದ್ದರು.
ಎಸ್ಪಿಯ ಎಚ್ಚರಿಕೆ
“ಶಾಲಾ ಬಸ್‌ಗಳು ನಿಧಾನವಾಗಿ ಸಂಚರಿಸುವುದರಿಂದ ಅಪಘಾತಗಳು ವಿರಳವೆಂದು ಭಾವಿಸಿ, ಆರೋಪಿಗಳು ಅವನ್ನೇ ಗುರಿಯಾಗಿಸಿದ್ದರು. ಪೋಷಕರು ಮತ್ತು ಶಾಲಾ ನಿರ್ವಹಣೆಯವರು ಎಚ್ಚರಿಕೆಯಿಂದ ನಿಜವಾದ ವಿಮೆ ಪಾಲಿಸಿ ಮಾಡಿಸಿಕೊಳ್ಳಬೇಕು” ಎಂದು ಎಸ್ಪಿ ಹರಿರಾಂ ಶಂಕರ್ ತಿಳಿಸಿದರು.






