
ವಿಟ್ಲ: ಮದುವೆ ನೆಪದಲ್ಲಿ ಫೋಟೋ ಮತ್ತು ವಿಡಿಯೋ ತೆಗೆದು, ಅವುಗಳನ್ನು ಲೀಕ್ ಮಾಡುವುದಾಗಿ ಬೆದರಿಸಿ ಸೌದಿ ಉದ್ಯೋಗಿಯೊಬ್ಬರಿಂದ 44.80 ಲಕ್ಷ ರೂಪಾಯಿ ವಂಚಿಸಿದ ಘಟನೆ ಬೆಳಕಿಗೆ ಬಂದಿದೆ.
ಪಿರ್ಯಾದಿದಾರರಾದ ಮಹಮ್ಮದ್ ಅಶ್ರಫ್ ತಾವರಕಡನ್ (53), ಕೇರಳ ಮೂಲದವರು ಹಾಗೂ ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿದ್ದಾರೆ. ಅವರು 2024ರ ಸೆಪ್ಟೆಂಬರ್‌ನಲ್ಲಿ ಮದುವೆಯ ಸಲುವಾಗಿ ಮಂಗಳೂರಿಗೆ ಬಂದ ಸಂದರ್ಭದಲ್ಲಿ, ಆರೋಪಿತರಾದ ಬಶೀರ್, ಸಫಿಯಾ ಮತ್ತು ಇತರರು ಹೆಣ್ಣು ನೋಡೋ ನೆಪದಲ್ಲಿ ಅವರನ್ನು ಸಂಪರ್ಕಿಸಿ, ಫೋಟೋ ಹಾಗೂ ವಿಡಿಯೋ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ನಂತರ ಆರೋಪಿತರು ಆ ಚಿತ್ರಣಗಳನ್ನು ಲೀಕ್ ಮಾಡುವುದಾಗಿ ಬೆದರಿಸಿ, ಪಿರ್ಯಾದಿದಾರರಿಂದ ಒಟ್ಟು ₹44.80 ಲಕ್ಷ ಹಣ ವಂಚಿಸಿರುವುದು ದೂರಿನಲ್ಲಿ ಉಲ್ಲೇಖವಾಗಿದೆ.
ಈ ಕುರಿತು ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ. 145/2025 ರಂತೆ ಕಲಂ 318(4), 308(2), 115(2), 351(2) r/w 3(5) BNS-2023 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದಾರೆ.






