
ಸುಳ್ಯ, ಅ.13: 35 ವರ್ಷಗಳಿಂದ ಪೊಲೀಸರ ಕಣ್ಣಿಗೆ ಬೀಳದೆ ಅಡಗಿ ಬದುಕುತ್ತಿದ್ದ ಆರೋಪಿಯನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ.
1990ರಲ್ಲಿ ಸುಳ್ಯ ತಾಲ್ಲೂಕಿನ ಅಲೆಟ್ಟಿ ಗ್ರಾಮದ ನಾಗಪಟ್ಟಣ ಎಂಬಲ್ಲಿ ನಡೆದ ಅಕ್ರಮ ಕೂಟ ಪ್ರಕರಣದಲ್ಲಿ ಶಾಂತಪ್ಪ ಮತ್ತು ಸುಬ್ಬಯ್ಯ ಎಂಬವರ ಮೇಲೆ ತಲ್ವಾರ್‌ನಿಂದ ದಾಳಿ ನಡೆಸಿ ತೀವ್ರ ರಕ್ತಗಾಯ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಕ್ರ.ಸಂ. 64/1990 U/s 143, 147, 148, 324, 326, 506 r/w 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದ ಆರೋಪಿ ಬಾಲನ್ (73), ನಾಟಿ ಮನೆ, ತ್ರಿಸ್ಸೂರ್ ಜಿಲ್ಲೆ (ಕೇರಳ) ಎಂಬಾತನು ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗದೆ 2002ರಲ್ಲಿ ಎಲ್‌ಪಿಸಿ ಆಗಿದ್ದನು. ಸುಮಾರು 35 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಬಾಲನ್‌ನನ್ನು ಸುಳ್ಯ ಪೊಲೀಸರು ಕೇರಳ ರಾಜ್ಯದ ತ್ರಿಸ್ಸೂರ್‌ನಿಂದ ಪತ್ತೆಹಚ್ಚಿ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ದಿನಾಂಕ 13.10.2025 ರಂದು ಸುಳ್ಯ ಜಿಎಂಎಫ್‌ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಪೊಲೀಸ್ ಇಲಾಖೆಯ ನಿಗಾವಳಿ ಮತ್ತು ಸುದೀರ್ಘ ತನಿಖೆಯ ಫಲವಾಗಿ ಈ ಬಂಧನ ಸಾಧ್ಯವಾಗಿದೆ ಎಂದು ತಿಳಿದುಬಂದಿದೆ.









