
ಪುತ್ತೂರು, ಅ.13: ಪುತ್ತೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆ ಕಳ್ಳತನ ಪ್ರಕರಣವನ್ನು ಪೊಲೀಸರು ಕೇವಲ ಕೆಲವೇ ದಿನಗಳಲ್ಲಿ ಭೇದಿಸಿ, ಆರೋಪಿಯನ್ನು ಬಂಧಿಸಿದ್ದಾರೆ.
ಫಿರ್ಯಾದಿದಾರರಾದ ಶ್ರೀಮತಿ ರೇವತಿ, ಪುತ್ತೂರು ತಾಲೂಕು ನಿವಾಸಿಯವರು ನೀಡಿದ ದೂರಿನಂತೆ, ದಿನಾಂಕ 12.10.2025 ರಂದು ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 5.00 ಗಂಟೆಯ ನಡುವಿನ ಸಮಯದಲ್ಲಿ ಅವರ ಮನೆಯೊಳಗೆ ನುಗ್ಗಿದ ಕಳ್ಳರು ಚಿನ್ನದ ಬಳೆ ಒಂದು, ಕಿವಿಯೋಲೆ ಒಂದು ಜೋಡಿ, ಚಿನ್ನದ ಸರ ಒಂದು ಹಾಗೂ ನಗದು ಹಣ ಕಳವು ಮಾಡಿದ್ದರು.
ಈ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 89/2025, ಕಲಂ 331(3), 305 ಬಿ.ಎನ್.ಎಸ್ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ಕೈಗೊಂಡ ಪೊಲೀಸರು ಕಳ್ಳತನದ ಸುಳಿವು ಪತ್ತೆಹಚ್ಚಿ, ಪ್ರವೀಣ್ (27), ಸಿಟಿ ಗುಡ್ಡೆ ಮನೆ, ಕಬಕ ಗ್ರಾಮ, ಪುತ್ತೂರು ತಾಲೂಕು ಎಂಬಾತನನ್ನು ಬಂಧಿಸಿದರು. ಆರೋಪಿಯಿಂದ ಕಳವು ಮಾಡಲಾದ ಚಿನ್ನಾಭರಣ ಹಾಗೂ ನಗದು ಹಣವನ್ನು ವಶಕ್ಕೆ ಪಡೆಯಲಾಗಿದೆ.
ಬಂಧಿತ ಆರೋಪಿಯನ್ನು ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಪುತ್ತೂರು ನಗರ ಪೊಲೀಸ್ ಠಾಣಾ ತಂಡದ ತ್ವರಿತ ತನಿಖೆ ಹಾಗೂ ಕಾರ್ಯಚರಣೆಯಿಂದ ಈ ಪ್ರಕರಣ ಭೇದನೆಯಾಗಿದೆ ಎಂದು ಪೊಲೀಸ್ ವಲಯದಿಂದ ತಿಳಿದುಬಂದಿದೆ.









