
ಪುತ್ತೂರು, ಅ.14: ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮದ ಕೌಡಿಚ್ಚಾರ್‌ನಲ್ಲಿ ನಡೆದ ಹಲ್ಲೆ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಪುತ್ತೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಪಿರ್ಯಾದಿದಾರರಾದ ಶ್ರವಣ್ ಕುಮಾರ್ ರವರ ದೂರಿನ ಪ್ರಕಾರ, ಅ.11ರಂದು ರಾತ್ರಿ ಸುಮಾರು 10.30 ಗಂಟೆಯ ವೇಳೆ ನವೀನ್ ಪಿ.ಜಿ ಅವರ ಜನರಲ್ ಸ್ಟೋರ್‌ಗೆ ವಸ್ತುಗಳನ್ನು ಖರೀದಿಸಲು ಹೋದಾಗ, ಅಲ್ಲಿ ಸಂಜನ್ ರೈ, ಪ್ರವೀಶ್ ನಾಯರ್, ರೇವಂತ್, ವಿನೀತ್ ರವರು ಅಂಗಡಿ ಮಾಲಿಕ ನವೀನ್ ಪಿ.ಜಿ ಅವರೊಂದಿಗೆ ಜಗಳ ಮಾಡುತ್ತಿದ್ದರು.
ಅದನ್ನು ನೋಡಿ “ಏಕೆ ಅವನಿಗೆ ಹೊಡೆಯುತ್ತಿದ್ದೀರಾ?” ಎಂದು ವಿಚಾರಿಸಿದ ಶ್ರವಣ್ ಕುಮಾರ್ ಅವರಿಗೆ ಸಂಜನ್ ರೈ ಅವಾಚ್ಯವಾಗಿ ಬೈದು ಕೈಯಿಂದ ಎಡಕೆನ್ನೆಗೆ ಹೊಡೆದು, ಖಾಲಿ ಸೋಡಾ ಬಾಟ್ಲಿಯಿಂದ ತಲೆಗೆ ಬಲವಾಗಿ ಹೊಡೆದಿದ್ದಾನೆ. ಬಳಿಕ ಸಂಜನ್ ರೈ ಹಾಗೂ ಆತನ ಜೊತೆಗಿದ್ದವರು ಕೈಯಿಂದ, ಕಾಲಿನಿಂದ ಹಲ್ಲೆ ನಡೆಸಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ.
ಈ ವೇಳೆ ಪಿರ್ಯಾದಿದಾರರ ಸ್ನೇಹಿತರಾದ ಸಿಂಚನ್ ಹಾಗೂ ನವೀನ್ ಪಿ.ಜಿ ಆರೋಪಿಗಳ ಹಲ್ಲೆ ತಡೆದಿದ್ದಾರೆ.
ಘಟನೆಯ ಹಿನ್ನೆಲೆಯಲ್ಲಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ.110/2025ರಂತೆ ಕಲಂ 115(2), 118(1), 352, 351(3) ಜೊತೆಗೆ 3(5) ಬಿ.ಎನ್.ಎಸ್. 2023 ಮತ್ತು ಹಿಂದುಳಿದ ವರ್ಗಗಳ ವಿರುದ್ಧದ ಅಟ್ಟಹಾಸ ತಡೆ ಕಾಯ್ದೆ (SC/ST Act) ನ 3(1)(r), 3(1)(s), 3(2)(va) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ತನಿಖೆ ನಡೆಸಿದ ಪೊಲೀಸರು ಸಂಜನ್ ರೈ ಮತ್ತು ಪ್ರವೀಶ್ ನಾಯರ್ ರವರನ್ನು ಬಂಧಿಸಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.









