
ಬಂಟ್ವಾಳ, ಅ.15 – ಕಾರು ರಿಪೇರಿ ಕೆಲಸದಲ್ಲಿದ್ದ ಮೆಕ್ಯಾನಿಕ್ ಒಬ್ಬರು ಮತ್ತೊಂದು ಕಾರು ಡಿಕ್ಕಿಯಾದ ಪರಿಣಾಮ ಗಂಭೀರವಾಗಿ ಗಾಯಗೊಂಡು ಬಳಿಕ ಮೃತಪಟ್ಟ ದುರಂತ ಘಟನೆ ಬಿ.ಸಿ.ರೋಡ್ ಗಾಣದಪಡ್ಡುನಲ್ಲಿ ನಡೆದಿದೆ.
ಮೃತನನ್ನು ಬೋಳಂತೂರು ನಿವಾಸಿ ಜಬ್ಬಾರ್ (33) ಎಂದು ಗುರುತಿಸಲಾಗಿದೆ. ಅವಿವಾಹಿತನಾಗಿರುವ ಜಬ್ಬಾರ್ ಗಾಣದಪಡ್ಡು ಶಿವಗಣೇಶ್ ಬ್ಯಾಟರಿ ಅಂಗಡಿಯಲ್ಲಿ ಕಾರ್ಮಿಕನಾಗಿದ್ದು, ಆಟೋ ಇಲೆಕ್ಟ್ರಿಕಲ್ ಕೆಲಸ ಮಾಡುತ್ತಿದ್ದರು.
ಮಂಗಳವಾರ ಮಧ್ಯಾಹ್ನ ಹೆದ್ದಾರಿಯ ಬದಿಯಲ್ಲಿ ನಿಂತಿದ್ದ ಕಾರೊಂದಕ್ಕೆ ಹಾರ್ನ್ ಅಳವಡಿಸುತ್ತಿದ್ದ ವೇಳೆ, ವೇಣೂರು ಮೂಲದ ವ್ಯಕ್ತಿಯೋರ್ವ ಬಂಟ್ವಾಳ ಬೈಪಾಸ್ ಕಡೆಯಿಂದ ಕಾರಿನಲ್ಲಿ ಬಂದು ಡಿಕ್ಕಿ ಹೊಡೆದಿದ್ದಾರೆ.
ಡಿಕ್ಕಿಯ ರಭಸಕ್ಕೆ ಗಂಭೀರವಾಗಿ ಗಾಯಗೊಂಡ ಜಬ್ಬಾರ್ ಅವರನ್ನು ತುರ್ತು ಚಿಕಿತ್ಸೆಗಾಗಿ ಮಂಗಳೂರು ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅವರು ಚಿಕಿತ್ಸೆ ಫಲಿಸದೆ ಅಲ್ಲಿ ಸಾವನ್ನಪ್ಪಿದರು.
ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.






