
ಬಂಟ್ವಾಳ, ಅ.15:ಬಂಟ್ವಾಳ ನಗರ ಪೊಲೀಸ್ ಠಾಣಾ ಪೊಲೀಸರು ಪಾಣೆಮಂಗಳೂರು ಸ್ಮಶಾನ ರಸ್ತೆಯಲ್ಲಿ ನಡೆಸಿದ ತಪಾಸಣೆಯಲ್ಲಿ ಎಂ.ಡಿ.ಎಂ.ಎ ಮಾದಕ ವಸ್ತು ಹೊಂದಿದ್ದ ವ್ಯಕ್ತಿಯನ್ನು ಬಂಧಿಸಿರುವ ಘಟನೆ ನಡೆದಿದೆ.
ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಠಾಣಾ ಉಪನಿರೀಕ್ಷಕರು ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ, ಪಾಣೆಮಂಗಳೂರು ಸ್ಮಶಾನದ ಪಕ್ಕದಲ್ಲಿ ನಿಲ್ಲಿಸಲಾಗಿದ್ದ ಕೆಎ–19–ಡಿ–1806 ನಂಬರಿನ ಆಟೋರಿಕ್ಷಾದೊಳಗೆ ಒಬ್ಬ ವ್ಯಕ್ತಿ ಅನುಮಾನಾಸ್ಪದವಾಗಿ ಕಂಡುಬಂದಿದ್ದಾನೆ. ವಿಚಾರಿಸಿದಾಗ, ಆತನು ಬಂಟ್ವಾಳ ತಾಲೂಕಿನ ಮೊಹಮ್ಮದ್ ಇಮ್ತಿಯಾಜ್ (40) ಎಂದು ಪತ್ತೆಯಾಗಿದೆ.
ಪೊಲೀಸರು ವಿಚಾರಣೆ ನಡೆಸಿದಾಗ, ಇಮ್ತಿಯಾಜ್ ತನ್ನ ಬಳಿ ಎಂ.ಡಿ.ಎಂ.ಎ (MDMA) ಮಾದಕ ವಸ್ತು ಇಟ್ಟುಕೊಂಡಿದ್ದು, ಅದನ್ನು ಸೇವಿಸಲು ಬಂದಿದ್ದಾಗಿ ಒಪ್ಪಿಕೊಂಡಿದ್ದಾನೆ. ಪೊಲೀಸರು ಅವನ ಬಳಿಯಿಂದ ಒಟ್ಟು 0.760 ಗ್ರಾಂ (760 ಮಿಲಿಗ್ರಾಂ) ಎಂ.ಡಿ.ಎಂ.ಎ ವಸ್ತುವನ್ನು ವಶಪಡಿಸಿಕೊಂಡಿದ್ದು, ಅದರ ಅಂದಾಜು ಮೌಲ್ಯ ರೂ.1,000 ಆಗಿದೆ.
ಈ ಸಂಬಂಧ ಬಂಟ್ವಾಳ ನಗರ ಠಾಣೆಯಲ್ಲಿ ಅ.ಕ್ರ.117/2025, NDPS ಕಾಯ್ದೆ 1985ರ ಕಲಂ 8(c), 22(b) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಮೊಹಮ್ಮದ್ ಇಮ್ತಿಯಾಜ್‌ರನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಪಾಣೆಮಂಗಳೂರು ಪ್ರದೇಶದಲ್ಲಿ ಮಾದಕ ವಸ್ತುಗಳ ವಿರುದ್ಧ ಪೊಲೀಸರು ಕೈಗೊಂಡ ಕ್ರಮದಿಂದ ಸ್ಥಳೀಯರಲ್ಲಿ ಶ್ಲಾಘನೆ ವ್ಯಕ್ತವಾಗಿದೆ.






