ಮಂಗಳೂರು ನಗರದಲ್ಲಿ ನಡೆದ ವೇಗದ ಪೊಲೀಸ್ ಕಾರ್ಯಾಚರಣೆಯ ಫಲವಾಗಿ ಲಾಲ್ ಬಾಗ್ ಹ್ಯಾಟ್ ಹಿಲ್ ಪ್ರದೇಶದ ಅಪಾರ್ಟ್‌ಮೆಂಟ್‌ಗಳಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಕೇವಲ 20 ಗಂಟೆಗಳಲ್ಲೇ ತೆರೆ ಎಳೆಯಲಾಗಿದೆ.

ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿಯ ದೇರೆಬೈಲ್ ಗ್ರಾಮದಲ್ಲಿರುವ ಹ್ಯಾಟ್ ಹಿಲ್ ಅಪಾರ್ಟ್‌ಮೆಂಟ್‌ನ ಮೂರು ಫ್ಲಾಟ್‌ಗಳಲ್ಲಿ ಕಳ್ಳರು ಸುಮಾರು ₹20 ಲಕ್ಷ ಮೌಲ್ಯದ ಚಿನ್ನಾಭರಣ, ₹5000 ನಗದು, 3000 ದಿರ್ಹಮ್ ಮತ್ತು ಮೊಬೈಲ್ ಫೋನ್‌ಗಳನ್ನು ಕಳವು ಮಾಡಿದ್ದರು. ಶ್ರೀ ರಿಯಾಜ್ ರಶೀದ್ ಅವರ ದೂರಿನ ಮೇರೆಗೆ ಉರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖೆ ಆರಂಭಿಸಿದ ಉರ್ವಾ ಠಾಣಾ ಅಧಿಕಾರಿಗಳು, ಶ್ವಾನ ದಳ ಹಾಗೂ ಫಿಂಗರ್ ಪ್ರಿಂಟ್ ತಜ್ಞರ ಸಹಕಾರದಿಂದ ಶೀಘ್ರ ಕಾರ್ಯಾಚರಣೆಗೆ ಕೈ ಹಾಕಿದರು. ಕೇವಲ 20 ಗಂಟೆಗಳೊಳಗೆ, ಉರ್ವಾ ಪೊಲೀಸ್ ತಂಡವು ಬೆಂಗಳೂರು ನಗರ ಪೊಲೀಸ್ ಇಲಾಖೆಯ ಸಹಕಾರದಿಂದ ಇಬ್ಬರು ಅಂತರರಾಜ್ಯ ಮನೆಕಳ್ಳರನ್ನು ಬೆಂಗಳೂರಿನಲ್ಲಿ ಬಂಧಿಸಿದೆ.

ಬಂಧಿತ ಆರೋಪಿಗಳು:
1️⃣ ಅಭಿಜಿತ್ ದಾಸ್ (24 ವರ್ಷ) – ಪಾಂಚಗೋರಿ, ಕಾಚಾರ್ ಜಿಲ್ಲೆ, ಅಸ್ಸಾಂ ರಾಜ್ಯ.
2️⃣ ದೇಬಾ ದಾಸ್ (21 ವರ್ಷ) – ಮೆಹೆರ್‌ಪುರ್ ಗ್ರಾಮ, ಕಾಚಾರ್ ಜಿಲ್ಲೆ, ಅಸ್ಸಾಂ ರಾಜ್ಯ.

ಆರೋಪಿ ಅಭಿಜಿತ್ ದಾಸ್ ವಿರುದ್ಧ ಮುಂಚೆಯೇ ಬೆಂಗಳೂರು ಹಾಗೂ ಅಸ್ಸಾಂ ರಾಜ್ಯಗಳಲ್ಲಿ ಮನೆಕಳ್ಳತನ ಪ್ರಕರಣಗಳು ದಾಖಲಾಗಿವೆ. ಬಂಧಿತರಿಂದ ಕಳವು ಮಾಡಿದ ಎಲ್ಲಾ ಚಿನ್ನಾಭರಣ, ₹5000 ನಗದು, ₹70,000 ಮೌಲ್ಯದ 3000 ದಿರ್ಹಮ್ ಮತ್ತು ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ತನಿಖೆಗಾಗಿ ಪೊಲೀಸರ ವಶಕ್ಕೆ ಪಡೆಯಲಾಗಿದೆ. ಇತರ ಪ್ರಕರಣಗಳ ಸಂಪರ್ಕವನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಈ ಶೀಘ್ರ ಕಾರ್ಯಾಚರಣೆಯನ್ನು ಡಿಸಿಪಿ (Crime) ಅವರ ಮೇಲ್ವಿಚಾರಣೆಯಲ್ಲಿ, ಕೇಂದ್ರ ಉಪವಿಭಾಗದ ಎಸಿಪಿ ಮತ್ತು ಉರ್ವಾ ಠಾಣಾ ಸಿಬ್ಬಂದಿ ಯಶಸ್ವಿಯಾಗಿ ನಡೆಸಿದ್ದಾರೆ.

– ಪೊಲೀಸ್ ಆಯುಕ್ತರು, ಮಂಗಳೂರು ನಗರ

Leave a Reply

Your email address will not be published. Required fields are marked *

Join WhatsApp Group
error: Content is protected !!