
ರಾಜ್ಯ ಸರ್ಕಾರವು ಅನರ್ಹ ಬಿಪಿಎಲ್ ಕಾರ್ಡ್ ಪಡೆದವರಿಗೆ ಬಿಗ್ ಶಾಕ್ ನೀಡಿದ್ದು, ರಾಜ್ಯಾದ್ಯಂತ ಒಟ್ಟು 4.9 ಲಕ್ಷ ಅನರ್ಹ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸಲಾಗಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕೈಗೊಂಡ ಅನರ್ಹ ಪಡಿತರದಾರರ ಪತ್ತೆ ಕಾರ್ಯದಲ್ಲಿ ಕಳೆದ ಕೆಲವು ವಾರಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಅನರ್ಹ ಫಲಾನುಭವಿಗಳನ್ನು ಗುರುತಿಸಿ ಅವರ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸಲಾಗಿದೆ.
ಇದರಿಂದಾಗಿ ಈ ಸಂಖ್ಯೆಯು 4.9 ಲಕ್ಷಕ್ಕೆ ಏರಿಕೆಯಾಗಿದೆ.
ಈ ಅಭಿಯಾನದಲ್ಲಿ ಬಿಪಿಎಲ್ ಕಾರ್ಡ್ ಕಳೆದುಕೊಂಡ ಅನರ್ಹರಿಗೆ ಸರ್ಕಾರ ಎಪಿಎಲ್ ಕಾರ್ಡ್‌ಗಳನ್ನು ನೀಡಲು ಮುಂದಾಗಿದೆ. ಅಕ್ರಮವಾಗಿ ಬಿಪಿಎಲ್ ಕಾರ್ಡ್ ಪಡೆದು ಪಡಿತರ ಯೋಜನೆಯ ಲಾಭ ಪಡೆದುಕೊಳ್ಳುತ್ತಿರುವ ಫಲಾನುಭವಿಗಳಿಗೆ ದಂಡ ವಿಧಿಸುವುದಕ್ಕೂ ಆಹಾರ ಇಲಾಖೆ ಚಿಂತನೆ ನಡೆಸುತ್ತಿದೆ. ಈ ಸಂಬಂಧ ದಂಡದ ನಿಯಮಗಳ ರೂಪುರೇಷೆಗಳನ್ನು ಕೂಡ ಸಿದ್ಧಪಡಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.






