
ಪುತ್ತೂರು: ಉಪ್ಪಳಿಗೆಯಲ್ಲಿ ಅ.20 ರಂದು ನಡೆದ ದೀಪೋತ್ಸವ ಕಾರ್ಯಕ್ರಮದಲ್ಲಿ ಆರ್.ಎಸ್.ಎಸ್. ಪ್ರತಿನಿಧಿ ಕಲ್ಲಡ್ಕ ಪ್ರಭಾಕರ ಭಟ್ ನೀಡಿದ ಭಾಷಣವು ಧಾರ್ಮಿಕ ದ್ವೇಷ ಪ್ರಚೋದನೆ, ಮಹಿಳೆಯರ ಘನತೆಗೆ ಧಕ್ಕೆ ಹಾಗೂ ಸಾರ್ವಜನಿಕ ಶಾಂತಿಗೆ ಅಪಾಯ ಉಂಟುಮಾಡುವಂತಿದೆ ಎಂಬ ಆರೋಪದ ಹಿನ್ನೆಲೆ ಪ್ರಕರಣ ದಾಖಲಾಗಿದೆ.
ಈ ಸಂಬಂಧ ಪುತ್ತೂರು ತಾಲೂಕಿನ ಈಶ್ವರಿ ಪದ್ಮುಂಜ ಎಂಬವರು ನೀಡಿದ ದೂರಿನ ಮೇರೆಗೆ, ಭಟ್ ಅವರು ಹಿಂದೂ-ಮುಸ್ಲಿಂ ಸಮುದಾಯಗಳ ಬಗ್ಗೆ ಅವಮಾನಕಾರಿ ಹೇಳಿಕೆಗಳನ್ನು ನೀಡಿ, ಮತದಾರರ ಸಂಖ್ಯೆಯನ್ನು ಉಲ್ಲೇಖಿಸಿ ಧಾರ್ಮಿಕ ವೈಮನಸ್ಸು ಉಂಟುಮಾಡಲು ಪ್ರಯತ್ನಿಸಿದ್ದಾಗಿ ದೂರಿನಲ್ಲಿ ತಿಳಿಸಿದೆ. ಕಾರ್ಯಕ್ರಮದ ಭಾಷಣ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರವಾಗಿರುವುದು ದೂರಿನಲ್ಲಿ ಉಲ್ಲೇಖವಾಗಿದೆ.
ದೂರಿನ ಅನ್ವಯ, ಅ.25 ರಂದು ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಅಪರಾಧ ಕ್ರಮಾಂಕ 118/2025 ರಂತೆ ಭಾರತೀಯ ನ್ಯಾಯ ಸಂಹಿತೆ (BNS) ಧಾರಣೆಗಳು 79, 196, 299, 302 ಹಾಗೂ 3(5) ಕಲಂಗಳಡಿ ಪ್ರಭಾಕರ ಭಟ್ ಹಾಗೂ ಕಾರ್ಯಕ್ರಮ ಆಯೋಜಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.






