
ಮಂಗಳೂರು: ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಜನರಿಂದ ಹಣ ಸಂಗ್ರಹಿಸಿ ಮೋಸ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಆರೋಪಿತರು ಕಾವೂರು ಠಾಣಾ ವ್ಯಾಪ್ತಿಯ ಹಲವಾರು ಜನರಿಗೆ ವಿದೇಶದಲ್ಲಿ ಉದ್ಯೋಗಕ್ಕಾಗಿ ವೀಸಾ ಕೊಡಿಸುವುದಾಗಿ ನಂಬಿಸಿ, ಸುಮಾರು 1 ಕೋಟಿ ರೂ. ಹಣವನ್ನು ಪಡೆದುಕೊಂಡಿದ್ದರು. ಆದರೆ ವೀಸಾ ಅಥವಾ ಉದ್ಯೋಗ ನೀಡದೆ ಜನರನ್ನು ವಂಚಿಸಿದ್ದರು.
ಈ ಹಿನ್ನೆಲೆಯಲ್ಲಿ ಕಾವೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 131/2025, ಕಲಂ 406, 420 ಜೊತೆಗೆ 149 ಐಪಿಸಿ ಅಡಿ ಪ್ರಕರಣ ದಾಖಲಾಗಿದೆ.
ಬಂಧಿತ ಆರೋಪಿತರ ವಿವರಗಳು:
1. ಪ್ರಕೃತಿ ಯು (34) – ತಂದೆ ಟಿ. ಉಪೇಂದ್ರ, ವಿಳಾಸ: ಮನೆ ನಂ. 41, ವಿವರ್ಸ್ ಕಾಲೋನಿ, ಮುನಿರಾಜು ಬಿಲ್ಡಿಂಗ್, ಆನೇಕಲ್ ಪಬ್ಲಿಕ್ ಸ್ಕೂಲ್ ಬಳಿ, ಆನೇಕಲ್ ತಾಲೂಕು, ಬೆಂಗಳೂರು.
2. ಆಲ್ಟನ್ ರೆಬೇರೋ (42) – ತಂದೆ ಆಗಸ್ಟಿನ್ ರೆಬೇರೋ, ವಿಳಾಸ: ಮನೆ ನಂ. 10/43, ಚರ್ಚ್ ರೋಡ್, ಗಂಗೋಳ್ಳಿ, ಕುಂದಾಪುರ, ಉಡುಪಿ ತಾಲೂಕು.
ಪೊಲೀಸರು ಸ್ವಾಧೀನಪಡಿಸಿಕೊಂಡಿರುವ ವಸ್ತುಗಳು:
ಆರೋಪಿತರಿಂದ 24 ಪಾಸ್‌ಪೋರ್ಟ್‌ಗಳು, 43 ಗ್ರಾಂ ಬಂಗಾರ (ಮೌಲ್ಯ ರೂ. 4,30,000/-) ಹಾಗೂ 2 ಮೊಬೈಲ್ ಫೋನ್‌ಗಳು ವಶಪಡಿಸಿಕೊಂಡಿದ್ದಾರೆ. ಈ ವಸ್ತುಗಳನ್ನು ಆರೋಪಿತರು ತಮ್ಮ ವಸತಿಯಲ್ಲಿ ಅಕ್ರಮವಾಗಿ ಇಟ್ಟುಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಕಾರ್ಯಾಚರಣೆ:
ಮಂಗಳೂರು ಉತ್ತರ ಉಪವಿಭಾಗದ ಎ.ಸಿ.ಪಿ. ಶ್ರೀಕಾಂತ್ ಕೆ. ಅವರ ಮಾರ್ಗದರ್ಶನದಲ್ಲಿ, ಕಾವೂರು ಪೊಲೀಸ್ ಠಾಣಾ ನಿರೀಕ್ಷಕ ರಾಘವೇಂದ್ರ ಎಂ. ಬೈಂದೂರು, ಉಪನಿರೀಕ್ಷಕ ಮಲ್ಲಿಕಾರ್ಜುನ ಬಿರಾದಾರ ಹಾಗೂ ಸಿಬ್ಬಂದಿಗಳಾದ ಹೆಡ್ ಕಾನ್ಸ್‌ಟೇಬಲ್ ನಾಗರತ್ನ, ಕಾನ್ಸ್‌ಟೇಬಲ್‌ಗಳು ರಾಘವೇಂದ್ರ, ಪ್ರವೀಣ್ ಮತ್ತು ರಿಯಾಜ್ ಅವರ ತಂಡ ಆರೋಪಿತರನ್ನು ಪತ್ತೆಹಚ್ಚಿ ಬಂಧಿಸಿದೆ.
ಬಂಧಿತ ಆರೋಪಿತರನ್ನು ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.






