
ಮಂಗಳೂರು, ನ.5 — ಮಂಗಳೂರಿನ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ IPS ಅವರ ಹೆಸರಿನಲ್ಲಿ ಸೈಬರ್ ಖದೀಮರು ನಕಲಿ ಫೇಸ್ಬುಕ್ ಖಾತೆ ತೆರೆಯುವ ಮೂಲಕ ಅಧಿಕಾರಿಯನ್ನೇ ಮೋಸಗೊಳಿಸಲು ಮುಂದಾಗಿದ್ದಾರೆ.
ಈ ವಿಚಾರ ತಿಳಿದ ಕೂಡಲೇ ಸುಧೀರ್ ರೆಡ್ಡಿ ಅವರು ಸ್ವತಃ ಪ್ರತಿಕ್ರಿಯೆ ನೀಡಿ, “Sudhir Kumar Reddy IPS ಎಂಬ ಹೆಸರಿನಲ್ಲಿ ನಕಲಿ ಖಾತೆ ತೆರೆದಿದ್ದಾರೆ. ಪ್ರೊಫೈಲ್ ಲಾಕ್ ಆಗಿದೆ, ಈಗಾಗಲೇ 11 ಜನರು ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಿ ಫ್ರೆಂಡ್ಸ್ ಆಗಿದ್ದಾರೆ,” ಎಂದು ತಿಳಿಸಿದ್ದಾರೆ.
ಅವರು ಹಾಸ್ಯಭರಿತವಾಗಿ ಪ್ರತಿಕ್ರಿಯಿಸಿ, “ಖಾತೆ ತೆರೆದವನು ಸುಧೀರ್ ಕುಮಾರ್ ರೆಡ್ಡಿ ಯಾರು ಅಂತ ಗೊತ್ತಿಲ್ಲ ಅನ್ಸುತ್ತೆ. ‘Her profile locked’ ಅಂತ ಬರೆದಿದ್ದಾನೆ — ಅಂದರೆ ಹೆಣ್ಣು ಅಂತ ಪರಿಗಣಿಸಿ ಪ್ರೊಫೈಲ್ ಬರೆದಿರೋದು ಖಚಿತ,” ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಅಧಿಕಾರಿಗಳು, ರಾಜಕಾರಣಿಗಳು ಹಾಗೂ ಖ್ಯಾತ ವ್ಯಕ್ತಿಗಳ ಹೆಸರಿನಲ್ಲಿ ನಕಲಿ ಖಾತೆ ತೆರೆಯುವುದು ಹೊಸದೇನಲ್ಲ. ಆದರೆ ಇದೀಗ ಮಂಗಳೂರಿನ ಉನ್ನತ ಪೊಲೀಸ್ ಅಧಿಕಾರಿಯೇ ಸೈಬರ್ ಖದೀಮರ ಗುರಿಯಾಗಿರುವುದು ಆತಂಕದ ಸಂಗತಿ.
ಸೈಬರ್ ಪೊಲೀಸರಿಂದ ಇಂತಹ ನಕಲಿ ಖಾತೆಗಳನ್ನು ಗುರುತಿಸಿ ಕ್ರಮ ಕೈಗೊಳ್ಳುವ ಕಾರ್ಯ ಈಗಾಗಲೇ ಆರಂಭವಾಗಿದೆ.






