
ಪುತ್ತೂರು: ಆರೋಪಿ ಸಮೂಹವನ್ನು ರಕ್ಷಿಸುವ ದುರುದ್ದೇಶದಿಂದ ಸುಳ್ಳು ದಾಖಲೆ ಸೃಜಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಎರಡು ಪ್ರಕರಣಗಳು ದಾಖಲಾಗಿವೆ.
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಅ.ಕ್ರ 115/2025ರಡಿ ಕಲಂ 132, 109, 303(2) r/w 3(5) ಭಾರತೀಯ ನ್ಯಾಯ ಸಂಹಿತೆ 2023 ಹಾಗೂ ಕಲಂ 4, 5, 6, 12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ–2020ರಡಿ ಕಾನೂನು ಕ್ರಮ ಜರುಗಿಸಲಾಗಿದೆ.
ವಾಹನದಲ್ಲಿ ಸಾಗಾಟ ಮಾಡಲಾಗುತ್ತಿದ್ದ ಜಾನುವಾರುಗಳಿಗೆ ಸಂಬಂಧಿಸಿದ ಖರೀದಿ ರಶೀದಿಗಳೆಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ದಾಖಲೆಗಳ ಕುರಿತು ಪರಿಶೀಲನೆ ನಡೆಸಿದ ಪೊಲೀಸರು, ಚನ್ನರಾಯಪಟ್ಟಣ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿಯಿಂದ ಮಾಹಿತಿ ಪಡೆದುಕೊಂಡಿದ್ದರು. ಶುಕ್ರವಾರದಂದು ಮಾತ್ರ ಜಾನುವಾರು ಸಂತೆ ನಡೆಯುವುದಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿತವಾಗಿದ್ದ ರಶೀದಿ ಸಂಖ್ಯೆ 27653 ಹಾಗೂ 27654 ದಾಖಲೆಗಳನ್ನು ತಿದ್ದಿ, ನಕಲಿ ರೂಪದಲ್ಲಿ ಸೃಜಿಸಿ ಹಂಚಿರುವುದು ದೃಢಪಟ್ಟಿದೆ.
ಇದರ ಜೊತೆಗೆ ಆರ್‌ಟಿಒ ಅಧಿಕಾರಿ ಹಾಗೂ ಪಶುವೈದ್ಯಾಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿದಾಗ, ಸಂಬಂಧಿತ ವಾಹನದಲ್ಲಿ ಜಾನುವಾರು ಸಾಗಾಟಕ್ಕೆ ಯಾವುದೇ ಅನುಮತಿ ನೀಡಲಾಗಿರಲಿಲ್ಲ ಎಂಬುದೂ ತಿಳಿದುಬಂದಿದೆ.
ಈ ಸುಳ್ಳು ದಾಖಲೆಗಳು ನಕಲಿ ಎಂಬುದು ಗೊತ್ತಿದ್ದರೂ ಆರೋಪಿ ವಲಯವನ್ನು ರಕ್ಷಿಸುವ ಉದ್ದೇಶದಿಂದ State office SDPI Karnataka ಎಂಬ “X” ಖಾತೆಯ ನಿರ್ವಹಣಾಕಾರರು, Thejasnews.comನ ಮಾಲಕ/ಸಂಪಾದಕರು, Sadath Bajathur ಸೇರಿದಂತೆ ಹಲವರು ಸುಳ್ಳು ಮಾಹಿತಿ ಪ್ರಸಾರ ಮಾಡಿದ್ದು, ಇದರಿಂದ ಸಾರ್ವಜನಿಕ ವಲಯದಲ್ಲಿ ಗೊಂದಲ, ಉದ್ವಿಗ್ನತೆ ಉಂಟಾಗಿ ಗುಂಪು ಸೇರುವ, ದೊಂಬಿ ಮಾದರಿಯ ಅಹಿತಕರ ಘಟನೆಗಳಿಗೆ ಪ್ರಚೋದನೆ ಸಿಗುವ ವಾತಾವರಣ ಸೃಷ್ಟಿಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಈ ಹಿನ್ನಲೆಯಲ್ಲಿ, 05.11.2025ರಂದು ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಮತ್ತೊಂದು ಪ್ರಕರಣ ಅ.ಕ್ರ 123/2025ರಡಿ ಕಲಂ 233, 240, 338, 353(1)(b), 192, 61(2)(b), 238(c) r/w 3(5) ಭಾರತೀಯ ನ್ಯಾಯ ಸಂಹಿತೆ 2023ರಂತೆ ಪ್ರಕರಣ ದಾಖಲಿಸಲಾಗಿದೆ.
ಕಠಿಣ ಕ್ರಮಕ್ಕೆ ಜಿಲ್ಲಾ ಪೊಲೀಸ್ ಎಚ್ಚರಿಕೆ
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಮುಂಬರುವ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು, ಪ್ರಚೋದನಕಾರಿ ಪೋಸ್ಟ್‌ಗಳು ಹಾಗೂ ವದಂತಿಗಳನ್ನು ಹರಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ಇಲಾಖೆ ಎಚ್ಚರಿಸಿದೆ. ಸಾರ್ವಜನಿಕರು ಮತ್ತು ಸಾಮಾಜಿಕ ಜಾಲತಾಣ ಬಳಕೆದಾರರು ಜವಾಬ್ದಾರಿಯುತವಾಗಿ ವರ್ತಿಸಿ, ಪರಿಶೀಲಿಸದ ಮಾಹಿತಿಯನ್ನು ಹಂಚಿಕೊಳ್ಳದಂತೆ ಮನವಿ ಮಾಡಿದೆ.






