ಪುತ್ತೂರು: ನಗರದ ಹೊರವಲಯದ ಮಂಜಲ್ಪಡ್ಪು ಬಳಿ ಶನಿವಾರ ಆಟೋ ರಿಕ್ಷಾ ಮತ್ತು ಕಾರಿನ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಗಾಯಗೊಂಡ ಘಟನೆ ನಡೆದಿದೆ.

ಗಾಯಾಳುಗಳನ್ನು ಆಟೋ ಚಾಲಕ, ಬಂಟ್ವಾಳ ತಾಲೂಕಿನ ಮುಡಿಪು ಸಮೀಪದ ಫಜೀರ್ ನಿವಾಸಿ ಸುನಿಲ್ ಪಿಂಟೋ (37), ಫಜೀರ್ ನಿವಾಸಿ ಉಸ್ಮಾನ್ (57) ಮತ್ತು ವಿದ್ಯಾರ್ಥಿನಿ ಫಾತಿಮತ್ ಮುರ್ಷಿದಾ (17) ಎಂದು ಗುರುತಿಸಲಾಗಿದೆ.

ಅಪಘಾತದಲ್ಲಿ ಸುನಿಲ್ ಮತ್ತು ಉಸ್ಮಾನ್ ಅವರ ಕಾಲುಗಳಿಗೆ ಗಂಭೀರ ಗಾಯವಾಗಿದ್ದು, ಮುರ್ಷಿದಾ ಅವರ ತಲೆಗೆ ಪೆಟ್ಟು ಬಿದ್ದಿದೆ. ಮೂವರಿಗೂ ಪುತ್ತೂರಿನ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಔಷಧಕ್ಕಾಗಿ ಬಂದ ವೇಳೆ ಅವಘಡ

ಫಜೀರ್‌ನಿಂದ ಆಟೋ ಬಾಡಿಗೆ ಮಾಡಿಕೊಂಡು ನಗರಕ್ಕೆ ಔಷಧ ತರಲು ಬಂದಿದ್ದ ಉಸ್ಮಾನ್, ಹಿಂತಿರುಗುವ ವೇಳೆ ಪುತ್ತೂರು ಸಮೀಪದ ಕುಂಬ್ರದ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ತಮ್ಮ ಮೊಮ್ಮಗಳು ಫಾತಿಮತ್ ಮುರ್ಷಿದಾಳನ್ನು ಜೊತೆಗೆ ಕರೆದೊಯ್ದಿದ್ದರು.

ಮಂಜಲ್ಪಡ್ಪು ತಲುಪುತ್ತಿದ್ದಂತೆ, ಎದುರುಗಡೆಯಿಂದ ವೇಗವಾಗಿ ಬಂದ ಕಾರು, ಮುಂದೆ ಸಾಗುತ್ತಿದ್ದ ಲಾರಿಯನ್ನು ಓವರ್‌ಟೇಕ್ ಮಾಡುವ ಭರದಲ್ಲಿ ನಿಯಂತ್ರಣ ಕಳೆದುಕೊಂಡು ನೇರವಾಗಿ ಆಟೋ ರಿಕ್ಷಾಗೆ ಗುದ್ದಿದೆ ಎನ್ನಲಾಗಿದೆ.

ವಾಹನಗಳಿಗೆ ಭಾರೀ ಹಾನಿ

ಅಪಘಾತದಿಂದ ಕಾರು ಮತ್ತು ಆಟೋ ರಿಕ್ಷಾ ಎರಡೂ ಗಂಭೀರವಾಗಿ ಜಖಂಗೊಂಡಿದ್ದು, ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ತಕ್ಷಣ ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಸಹಕರಿಸಿದರು.

ಘಟನೆಗೆ ಸಂಬಂಧಿಸಿ ಪುತ್ತೂರು ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!