
ಪುತ್ತೂರು, ನ. 8: ಪುತ್ತೂರಿನಲ್ಲಿ ನಿಷೇಧಿತ ಮಾದಕ ವಸ್ತು ಸಾಗಾಟವನ್ನು ಪತ್ತೆಹಚ್ಚಿದ ಪೊಲೀಸರು, ಆಟೋ ರಿಕ್ಷಾದಲ್ಲಿ ಗಾಂಜಾ ಹಾಗೂ ತಲವಾರು ಸಾಗಿಸುತ್ತಿದ್ದ ಆರೋಪಿಯನ್ನು ಬಂಧಿಸಿರುವ ಘಟನೆ ಶುಕ್ರವಾರ ಮಧ್ಯಾಹ್ನ ವರದಿಯಾಗಿದೆ.
ಲಭಿಸಿದ ಖಚಿತ ಮಾಹಿತಿಯ ಮೇರೆಗೆ, ಸವಣೂರು ಕಡೆಯಿಂದ ಪುತ್ತೂರು ಕಡೆಗೆ ಆಟೋ ರಿಕ್ಷಾದಲ್ಲಿ ಪ್ರಸಾದ್ ಎಂಬಾತ ಗಾಂಜಾ ಸಾಗಿಸುತ್ತಿರುವುದಾಗಿ ತಿಳಿದುಬಂದ ಹಿನ್ನೆಲೆಯಲ್ಲಿ, ಪುತ್ತೂರು ನಗರ ಪೊಲೀಸ್ ಠಾಣೆಯ ಉಪನಿರೀಕ್ಷಕ ಜನಾರ್ಧನ ಕೆ.ಎಂ. ಅವರು ಸಿಬ್ಬಂದಿಗಳೊಂದಿಗೆ ಕಾರ್ಯಾಚರಣೆ ನಡೆಸಿದ್ದಾರೆ.
ಸವಣೂರು–ಪುತ್ತೂರು ಮಾರ್ಗಮಧ್ಯೆ ಆಟೋ ರಿಕ್ಷಾವನ್ನು ತಡೆದು ಪರಿಶೀಲಿಸಿದ ವೇಳೆ, ಸುಮಾರು 1 ಕೆಜಿ ಗಿಂತಲೂ ಅಧಿಕ ತೂಕದ ಗಾಂಜಾ ಹಾಗೂ ಸುಮಾರು 25 ಇಂಚು ಉದ್ದದ ಮಾರಕ ತಲವಾರು ಪತ್ತೆಯಾಗಿದೆ.
ಪರಿಶೀಲನೆ ವೇಳೆ ಆಟೋ ಚಾಲಕ ಕಡಬ ತಾಲೂಕಿನ ಸವಣೂರು ನಿವಾಸಿ ಪ್ರಸಾದ್ ಇ (35) ಎಂದು ಗುರುತಿಸಲಾಗಿದೆ. ತಕ್ಷಣವೇ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.
ಈ ಸಂಬಂಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ
ಅ.ಕ್ರ: 106/2025
NDPS ಕಾಯ್ದೆ ಕಲಂ 8(C), 20(ii)(c) ಹಾಗೂ Indian Arms Act ಕಲಂ 25(1B)(b) ಅಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.
ಆರೋಪಿಯನ್ನು ಬಂಧಿಸಲಾಗಿದ್ದು, ಮುಂದಿನ ತನಿಖೆಗಾಗಿ ವಿಚಾರಣೆ ನಡೆಸಿ, ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.






