ಪುತ್ತೂರು, ನ.11: ಜನವಸತಿ ಪ್ರದೇಶಗಳು, ಅಂಗನವಾಡಿ ಹಾಗೂ ಶಾಲಾ परिसरಗಳಲ್ಲಿ ಅಕೇಶಿಯಾ ಮರಗಳನ್ನು ಬೆಳೆಸುವುದು ಆರೋಗ್ಯಕ್ಕೆ ಹಾನಿಕಾರಕವಾಗಿದ್ದು, ಈ ಮರಗಳನ್ನು ತೆರವುಗೊಳಿಸುವಂತೆ ಈ ಹಿಂದೆ ಸುಪ್ರೀಂ ಕೋರ್ಟ್‌ ಕೂಡಾ ಆದೇಶ ನೀಡಿದೆ. ಈ ನಿಟ್ಟಿನಲ್ಲಿ ಪುತ್ತೂರು ಶಾಸಕ ಅಶೋಕ್ ರೈ ಅವರು ಕ್ಷೇತ್ರದ ಸೂಚಿತ ಪ್ರದೇಶಗಳಲ್ಲಿ ಅಕೇಶಿಯಾ ಮರಗಳನ್ನು ತಕ್ಷಣ ತೆರವುಗೊಳಿಸುವಂತೆ ಅರಣ್ಯ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಆರ್ಯಾಪು ಗ್ರಾಮದ ಉಡ್ಡಂಗಳ ಪದವು ಪ್ರದೇಶದಲ್ಲಿ ಸುಮಾರು 30 ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ಅಕೇಶಿಯಾ ಮರಗಳು ವ್ಯಾಪಕವಾಗಿ ಬೆಳೆದಿದ್ದು, ಸ್ಥಳೀಯ ನಿವಾಸಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಗ್ರಾಮ ಪಂಚಾಯತ್ ಸದಸ್ಯ ಪವಿತ್ರ ರೈ ಅವರು ದೂರು ನೀಡಿದ್ದರು. ಈ ಕುರಿತು ಆರ್ಯಾಪು ಗ್ರಾಮ ಪಂಚಾಯತ್‌ ಮರಗಳನ್ನು ತೆರವುಗೊಳಿಸುವ ನಿರ್ಣಯವನ್ನು ಈಗಾಗಲೇ ಅಂಗೀಕರಿಸಿತ್ತು. ಆದರೂ ಅರಣ್ಯ ಇಲಾಖೆ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬಂದಿತ್ತು.

ಸ್ಥಳೀಯರ ಸಮಸ್ಯೆಗೆ ಸ್ಪಂದಿಸಿರುವ ಶಾಸಕ ಅಶೋಕ್ ರೈ, ಅಕೇಶಿಯಾ ಮರಗಳನ್ನು ತಕ್ಷಣ ತೆರವುಗೊಳಿಸಿ, ಅವುಗಳ ಬದಲು ಕಾಡು ಹಣ್ಣಿನ ಗಿಡಗಳನ್ನು ನೆಟ್ಟು ಪರಿಸರ ಸಮತೋಲನ ಕಾಪಾಡುವ ಕೆಲಸ ನಡೆಸುವಂತೆ ಅರಣ್ಯ ಇಲಾಖೆಗೆ ನಿರ್ದೇಶನ ನೀಡಿದ್ದಾರೆ.

ಇದೇ ವೇಳೆ, “ಇಲಾಖೆ ಶೀಘ್ರ ಕ್ರಮ ಕೈಗೊಳ್ಳದಿದ್ದಲ್ಲಿ ಸ್ಥಳೀಯ ಜನರು ಸ್ವತಃ ಮರಗಳನ್ನು ಕಟ್ಟಿ ಕಟ್ಟಿಗೆಯಾಗಿ ಬಳಸಿಕೊಳ್ಳುತ್ತಾರೆ” ಎಂದು ಎಚ್ಚರಿಕೆಯ ಮಾತನ್ನೂ ಆಡಿದ್ದಾರೆ.

ಜನರ ಆರೋಗ್ಯ ಹಾಗೂ ಪರಿಸರ ಸುರಕ್ಷತೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!