ಪುತ್ತೂರು, ನ.11:ಕರ್ನಾಟಕ ಗೋವಧೆ ತಡೆ ಮತ್ತು ದನಗಳ ಸಂರಕ್ಷಣಾ ಕಾಯ್ದೆ ಕುರಿತು ಮಸೀದಿಗಳ ಒಳಗೆ ಪೊಲೀಸ್ ಜಾಗೃತಿ ಕಾರ್ಯಕ್ರಮ ನಡೆಸುತ್ತಿರುವುದು ಅಸಂವಿಧಾನಿಕವಾಗಿದ್ದು, ಇದು ನಿರ್ದಿಷ್ಟ ಸಮುದಾಯವನ್ನು ಕ್ರಿಮಿನಲೈಸ್ ಮಾಡುವ ದುರ್ನಡವೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ಅಧ್ಯಕ್ಷ ಅಶ್ರಫ್ ಕಲ್ಲೇಗ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಪುತ್ತೂರು ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳ್ತಂಗಡಿ ತಾಲೂಕಿನ ಕೊಕ್ಕಡ ಹಾಗೂ ಸುಳ್ಯ ತಾಲೂಕಿನ ಕೆಲವು ಮಸೀದಿಗಳಲ್ಲಿ, ಪ್ರಾರ್ಥನೆಗೆ ಬಂದ ಜನರನ್ನು ತಡೆದು ಪೊಲೀಸರು ಗೋವಧೆ ಕಾಯ್ದೆಯ ಬಗ್ಗೆ ಜಾಗೃತಿ ನೀಡಿರುವುದಲ್ಲದೆ, ಕಾನೂನು ಉಲ್ಲಂಘಿಸಿದರೆ ಮನೆ ಜಪ್ತಿ ಮಾಡುವುದಾಗಿ ಬೆದರಿಸಿರುವ ಘಟನೆಗಳು ನಡೆದಿವೆ ಎಂದು ಆರೋಪಿಸಿದರು.

“ರಾಜ್ಯವು ಸಂವಿಧಾನದ ಪ್ರಕಾರ ಧರ್ಮ ನಿರಪೇಕ್ಷವಾಗಿರಬೇಕು. ಆದರೆ ಧಾರ್ಮಿಕ ಕೇಂದ್ರದೊಳಗೆ ಮಾತ್ರ ಇಂತಹ ಜಾಗೃತಿ ಕಾರ್ಯಕ್ರಮ ನಡೆಸುವುದು, ಅದು ಕೂಡಾ ಸೂಕ್ಷ್ಮ ವಿಷಯದ ಮೇಲೆ, ಸಂವಿಧಾನದ ಆಶಯ ಮತ್ತು ರಾಜ್ಯದ ತಟಸ್ಥತೆಯನ್ನು ಉಲ್ಲಂಘಿಸುತ್ತದೆ. ಇದು ಮುಸ್ಲಿಂ ಸಮುದಾಯವನ್ನೇ ಗುರಿಯಾಗಿಸಿ ಅಪರಾಧ ಮನಸ್ಥಿತಿಗೆ ತಳ್ಳುವ ಯತ್ನವಾಗಿದೆ” ಎಂದು ಅವರು ಹೇಳಿದರು.

ಹಿಂದಿನ ಹಲವು ಪ್ರಕರಣಗಳಲ್ಲಿ ಇತರ ಸಮುದಾಯದವರ ಮೇಲೆಯೂ ದನ ಕಳವು, ಸಾಗಾಟದ ಪ್ರಕರಣಗಳು ದಾಖಲಾಗಿದ್ದರೂ, ಕೇವಲ ಮಸೀದಿಗಳಲ್ಲೇ ಜಾಗೃತಿ ನಡೆಸುತ್ತಿರುವುದು ಸಮುದಾಯ ಗುರಿ ದಾಳಿಯಂತೆ ಕಾಣುತ್ತಿದೆ. ಇದು ಧಾರ್ಮಿಕ ತಾರತಮ್ಯ, ಅಧಿಕಾರ ದುರುಪಯೋಗ ಮತ್ತು ಕಾನೂನು ಉಲ್ಲಂಘನೆಯಾಗಿದೆ ಎಂದು ಅವರು ಆರೋಪಿಸಿದರು.

“ಜಾಗೃತಿ ಕಾರ್ಯಕ್ರಮ ನಡೆಸುವುದಾದರೆ ಎಲ್ಲ ಜಾತಿ, ಧರ್ಮ, ಪುರುಷ–ಮಹಿಳೆಯರು ಸೇರಬಹುದಾದ ಸಾರ್ವಜನಿಕ ವೇದಿಕೆಗಳಲ್ಲಿ ನಡೆಸಬೇಕು. ಧಾರ್ಮಿಕ ಸ್ಥಳಗಳಲ್ಲಿ ನಿರ್ದಿಷ್ಟ ಸಮುದಾಯಕ್ಕೆ ಮಾತ್ರ ಅನ್ವಯಿಸುವಂತೆ ಬಿಂಬಿಸುವುದು ಅಪಾಯಕಾರಿ ಪ್ರವೃತ್ತಿ. ಈ ಕೃತ್ಯ ಎಸಗಿದ ಪೊಲೀಸ್ ಸಿಬ್ಬಂದಿ ಮತ್ತು ಅದಕ್ಕೆ ಆದೇಶ ನೀಡಿದ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಅವರು ಆಗ್ರಹಿಸಿದರು.

ಸುದ್ಧಿಗೋಷ್ಠಿಯಲ್ಲಿ

ಉಪಾಧ್ಯಕ್ಷ ಮೂಸೆ ಕರೀಂ ಮಾಣಿ,

ಕೋಶಾಧಿಕಾರಿ ಅಶ್ರಫ್ ಬಾವು ಪಡೀಲ್,

ಕಾರ್ಯದರ್ಶಿಗಳು ಬಶೀರ್ ಪರ್ಲಡ್ಕ, ರಶೀದ್ ಮುರ,

ಕಾನೂನು ಸಲಹೆಗಾರ ಶಾಕಿರ್ ಹಾಜಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Join WhatsApp Group
error: Content is protected !!