
ಪುತ್ತೂರು, ನ.12:ಪುತ್ತೂರು ನಗರದ ಅತ್ಯಂತ ವಾಹನ ದಟ್ಟಣೆ ಮತ್ತು ಟ್ರಾಫಿಕ್ ಜಾಮ್ ಸಮಸ್ಯೆ ಸಂಭವಿಸುವ ಪ್ರಮುಖ ಸ್ಥಳವಾಗಿರುವ ಅರുണಾ ಜಂಕ್ಷನ್‌ನ ಸಮಗ್ರ ಅಭಿವೃದ್ಧಿಗೆ ಪುತ್ತೂರು ನಗರ ಯೋಜನಾ ಪ್ರಾಧಿಕಾರ ಮುಂದಾಗಿದೆ. ಅರुणಾ ಜಂಕ್ಷನ್‌ನಿಂದ ಎ.ಪಿ.ಎಂ.ಸಿ. ಕಡೆಗೆ ಸಾಗುವ ರಸ್ತೆ ಅವೈಜ್ಞಾನಿಕ ವಿನ್ಯಾಸ ಹಾಗೂ ಕಿರಿದಾದ ಅಗಲದಿಂದಾಗಿ ಇಲ್ಲಿ ನಿತ್ಯ ವಾಹನ ದಟ್ಟಣೆ ಉಂಟಾಗುತ್ತಿದ್ದು, ಪಾದಚಾರಿಗಳ ಸಂಚಾರವೂ ದುಸ್ತರವಾಗಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಈ ಹಿನ್ನೆಲೆಯಲ್ಲಿ ನಗರ ಸಂಪರ್ಕ ಸುಧಾರಣೆ, ವಾಹನ ಸಂಚಾರ ಸುಗಮಗೊಳಿಸುವುದು, ರಸ್ತೆ ಸುರಕ್ಷತೆ ಹೆಚ್ಚಿಸುವುದು ಹಾಗೂ ಟ್ರಾಫಿಕ್ ದಟ್ಟಣೆ ನಿಯಂತ್ರಿಸುವ ಉದ್ದೇಶದಿಂದ ಪುತ್ತೂರು ನಗರ ಯೋಜನಾ ಪ್ರಾಧಿಕಾರ ತನ್ನ ಸಾಮಾನ್ಯ ನಿಧಿಯನ್ನು ಬಳಸಿಕೊಂಡು ಜಂಕ್ಷನ್ ಅಭಿವೃದ್ಧಿಗೆ ಯೋಜನೆ ರೂಪಿಸಿದೆ.
ಪ್ರಸ್ತುತ ಯೋಜನೆ ಪ್ರಾಥಮಿಕ ಹಂತದಲ್ಲಿದ್ದು, ಸ್ಥಳ ಪರಿಶೀಲನೆ ಕಾರ್ಯ ಪೂರ್ಣಗೊಂಡಿದೆ. ಮುಂದಿನ ಹಂತಗಳಲ್ಲಿ ಯೋಜನೆಯ ಅಂದಾಜು ಪಟ್ಟಿ ತಯಾರಿ, ಅಭಿವೃದ್ಧಿ ನೀಲನಕ್ಷೆ ರೂಪಿಸುವಿಕೆ, ಸಂಬಂಧಪಟ್ಟ ಇಲಾಖೆಗಳಿಂದ ಅನುಮತಿ ಪಡೆಯುವುದು, ಅಗತ್ಯವಿದ್ದಲ್ಲಿ ಭೂ ಸ್ವಾಧೀನ, ಮಾತುಕತೆ ಹಾಗೂ ಪರಸ್ಪರ ಸಹಕಾರದ ಕ್ರಮಗಳು ನಡೆಯಬೇಕಾಗಿದೆ ಎಂದು ಪ್ರಾಧಿಕಾರ ತಿಳಿಸಿದೆ.
ಈ ಕುರಿತು ಈಗಾಗಲೇ ಪುತ್ತೂರಿನ ಮಾನ್ಯ ಶಾಸಕರಿಂದ ಮಾರ್ಗದರ್ಶನ ಹಾಗೂ ಸಲಹೆ ಸೂಚನೆಗಳನ್ನು ಪಡೆಯಲಾಗಿದೆ. ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಳ್ಳಲು ಕರ್ನಾಟಕ ಸರ್ಕಾರ, ಸ್ಥಳೀಯ ಶಾಸಕರು, ಪುತ್ತೂರು ನಗರಸಭೆ, ಪ್ರಾಧಿಕಾರದ ಸಹೋದ್ಯೋಗಿಗಳು, ಪತ್ರಕರ್ತರು ಹಾಗೂ ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ.
ಯೋಜನೆಯಲ್ಲಿ ನಗರಾಭಿವೃದ್ದಿಯ ಆಶಯವಿದ್ದು, ನಗರದ ನಾಗರಿಕರು ಹಾಗೂ ವಿವಿಧ ಕ್ಷೇತ್ರಗಳ ಸಹಕಾರದಿಂದ ಇದು ಯಶಸ್ವಿಯಾಗಿ ಅನುಷ್ಠಾನಗೊಳ್ಳಲಿದೆ ಎಂಬ ಆಶಯವನ್ನು ಪ್ರಾಧಿಕಾರದ ಅಧ್ಯಕ್ಷರು ವ್ಯಕ್ತಪಡಿಸಿದ್ದಾರೆ.
“ಪುತ್ತೂರಿನ ಮಹಾಜನತೆ ಈ ಯೋಜನೆಗೆ ಕೈಜೋಡಿಸಿ, ಯಶಸ್ಸಿನ ಪಾಲುದಾರರಾಗಬೇಕು” ಎಂದು ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮಳ ರಾಮಚಂದ್ರ ಅವರು ಮನವಿ ಮಾಡಿದ್ದಾರೆ.
ಎಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್‌ನ ಕಾರ್ಯದರ್ಶಿ ವೆಂಕಟರಾಜ್, ಸದಸ್ಯರಾದ ಪ್ರಮೋದ್ ಕುಮಾರ್, ಸರ್ವೇಯರ್ ರಾಜಶೇಖರ್, ನಗರಸಭಾ ಇಂಜಿನಿಯರ್ ಮನೋಜ್ ಕುಮಾರ್, ಆದರ್ಶ್ ಕದ್ರಿ, ಚೇತನ್, ಹಾಗೂ ನಗರ ವಿನ್ಯಾಸಗಾರ ಅಜೇಯ ಕೃಷ್ಣ ಉಪ್ಪಂಗಳ, ಜೊತೆಗೆ ಪ್ರಾಧಿಕಾರದಿಂದ ಅಮಳ ರಾಮಚಂದ್ರ, ನಿಹಾಲ್ ಶೆಟ್ಟಿ, ಲ್ಯಾನ್ಸಿ ಮಸ್ಕರೇನ್ಹಸ್ ಮತ್ತು ಅನ್ವರ್ ಖಾಸಿಂ ಉಪಸ್ಥಿತರಿದ್ದರು.






