ಪುತ್ತೂರು: ಚುನಾವಣೆ ಸಂದರ್ಭದಲ್ಲಿನ ರಾಜಕೀಯ ವೈರತ್ವಗಳು ಸಾಮಾನ್ಯ. ಆದರೆ ಚುನಾವಣೆ ಮುಗಿದ ಬಳಿಕವೂ ದ್ವೇಷ ಮುಂದುವರೆಸದೆ ಮಾನವೀಯತೆ ತೋರುವ ರಾಜಕಾರಣಿಗಳು ಅಪರೂಪ. ಪುತ್ತೂರು ತಾಲೂಕಿನ ಕೋಡಿಂಬಾಡಿ ಗ್ರಾಮದಲ್ಲಿ ಇಂತಹದ್ದೊಂದು ಮಾದರಿ ಘಟನೆ ನಡೆದಿದೆ.

ಉಪ್ಪಿನಂಗಡಿ – ಪುತ್ತೂರು ರಸ್ತೆಯ ಸೇಡಿಯಾಪು ಬಳಿ ರಸ್ತೆ ಮಾರ್ಜಿನ್‌ನಲ್ಲಿ ಸಣ್ಣ ಅಂಗಡಿ ನಡೆಸಿ ಜೀವನ ಸಾಗಿಸುತ್ತಿದ್ದವರು ಸ್ಥಳೀಯ ನಿವಾಸಿ ಸುಧಾಕರ್. ಕಳೆದ ಗ್ರಾ.ಪಂ. ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಅವರು ಕಾಂಗ್ರೆಸ್ ಅಭ್ಯರ್ಥಿಗಳ ವಿರುದ್ಧ ಕೆಲಸ ಮಾಡಿದ್ದರು. ಆದರೆ ಚುನಾವಣೆಯಲ್ಲಿ ಕೋಡಿಂಬಾಡಿ ಗ್ರಾ.ಪಂ. ಹಾಗೂ ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲಿತರು ಜಯಭೇರಿ ಬಾರಿಸಿದ್ದಾರೆ.

ಇತ್ತೀಚೆಗೆ ಲೋಕೋಪಯೋಗಿ ಇಲಾಖೆ ರಸ್ತೆ ಮಾರ್ಜಿನ್‌ನಲ್ಲಿದ್ದ ಸುಧಾಕರ್ ಅವರ ಅಂಗಡಿಯನ್ನು ಅನಧಿಕೃತ ಎಂದು ಗುರುತಿಸಿ ತೆರವುಗೊಳಿಸಲು ಸೂಚನೆ ನೀಡಿತ್ತು. ಗ್ರಾ.ಪಂ. ಕೂಡ ಈ ಸಂಬಂಧ ನೋಟಿಸ್ ನೀಡಿತ್ತು. ಅಂಗಡಿಯೇ ಕುಟುಂಬದ ಏಕೈಕ ಆದಾಯ ಮೂಲವಾಗಿದ್ದ ಕಾರಣ ಸುಧಾಕರ್ ತೀವ್ರ ಆತಂಕಕ್ಕೆ ಒಳಗಾಗಿದ್ದರು. ಚುನಾವಣೆ ಸಂದರ್ಭದಲ್ಲಿ ತಾನು ವಿರೋಧಿಸಿದ್ದರಿಂದ ಸಹಾಯ ಸಿಗಬಹುದೇ ಎಂಬ ಗೊಂದಲದಲ್ಲಿದ್ದರು.

ಈ ಸಂದರ್ಭದಲ್ಲಿ ಸುಧಾಕರ್ ಅವರು ಕೋಡಿಂಬಾಡಿ ಗ್ರಾ.ಪಂ. ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರ್ ಅವರನ್ನು ಸಂಪರ್ಕಿಸಿ ಬದಲಿ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದರು. ಉಪಾಧ್ಯಕ್ಷರು ಈ ವಿಚಾರವನ್ನು ಶಾಸಕ ಅಶೋಕ್ ರೈ ಅವರ ಗಮನಕ್ಕೆ ತಂದರು.

ವಿಷಯ ಗಮನಿಸಿದ ಶಾಸಕ ಅಶೋಕ್ ರೈ,

> “ಅಂಗಡಿ ಮಾಲಕರು ಚುನಾವಣೆಯಲ್ಲಿ ನಮ್ಮ ವಿರುದ್ಧ ಕೆಲಸ ಮಾಡಿದ್ದರೂ, ಅವರಿಗೆ ತೊಂದರೆ ನೀಡಬಾರದು. ಮಾನವೀಯತೆಯ ಆಧಾರದಲ್ಲಿ ಬದಲಿ ವ್ಯವಸ್ಥೆ ಕಲ್ಪಿಸಿ”



ಎಂದು ಉಪಾಧ್ಯಕ್ಷರಿಗೆ ಸ್ಪಷ್ಟ ಸೂಚನೆ ನೀಡಿದರು.

ಶಾಸಕರ ಆದೇಶದಂತೆ ಕೋಡಿಂಬಾಡಿ ಗ್ರಾ.ಪಂ. ವತಿಯಿಂದ ಸುಧಾಕರ್ ಅವರಿಗೆ ಬದಲಿ ಅಂಗಡಿ ಕಟ್ಟಡ ನಿರ್ಮಿಸಲು ವ್ಯವಸ್ಥೆ ಕಲ್ಪಿಸಲಾಗಿದೆ. ಈ ಮಾನವೀಯ ನಡೆಯನ್ನು ಕಂಡು ಸ್ಥಳೀಯರು ಶಾಸಕರಿಗೆ ಹಾಗೂ ಗ್ರಾ.ಪಂ. ಆಡಳಿತಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

“ನಾವು ಕಾಂಗ್ರೆಸ್ಸಿಗರು, ಅನ್ಯಾಯ ಮಾಡುವುದು ನಮ್ಮ ಧರ್ಮವಲ್ಲ. ಚುನಾವಣೆಯಲ್ಲಿ ನಮ್ಮ ವಿರುದ್ಧ ಕೆಲಸ ಮಾಡಿದರೂ, ಅವರ ಅಂಗಡಿಯನ್ನು ತೆರವುಗೊಳಿಸುವ ಅಧಿಕಾರ ಇದ್ದರೂ ನಾವು ಹಾಗೆ ಮಾಡಲಿಲ್ಲ. ಶಾಸಕ ಅಶೋಕ್ ರೈ ಅವರ ಸೂಚನೆಯಂತೆ ಬದಲಿ ವ್ಯವಸ್ಥೆ ಕಲ್ಪಿಸಿದ್ದೇವೆ. ಇದಕ್ಕಾಗಿ ಅಂಗಡಿ ಮಾಲಕರು ಋಣಿಯಾಗಿರಬೇಕು.”

— ಜಯಪ್ರಕಾಶ್ ಬದಿನಾರ್
ಗ್ರಾ.ಪಂ. ಉಪಾಧ್ಯಕ್ಷರು, ಕೋಡಿಂಬಾಡಿ

Leave a Reply

Your email address will not be published. Required fields are marked *

Join WhatsApp Group
error: Content is protected !!