
ಬೆಳ್ತಂಗಡಿಯ ಶ್ರೀರಾಮ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿಯಲ್ಲಿ 15 ಕೋ. ರೂ.ಗಳಿಗೂ ಅಧಿಕ ಅವ್ಯವಹಾರ ನಡೆದಿದೆ ಎಂದು ಸೊಸೈಟಿಯ ಸಂತ್ರಸ್ತ ನಿರ್ದೇಶಕರ ಸಮಿತಿ ಆರೋಪಿಸಿದ್ದುಈ ಬಗ್ಗೆ ತನಿಖಾ ಸಂಸ್ಥೆಯಿಂದ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಸಮಿತಿ ಸದಸ್ಯ ವಿಶ್ವನಾಥ್ ಬಿ., ಸಂಸ್ಥೆಯಲ್ಲಾದ ಅವ್ಯವಹಾರದ ಬಗ್ಗೆ ಸಂಬಂಧಪಟ್ಟಇಲಾಖೆಗಳಿಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ. ಮುಖ್ಯಮಂತ್ರಿ, ಗೃಹಸಚಿವರು ಹಾಗೂ ಉಸ್ತುವಾರಿ ಸಚಿವರು ತನಿಖೆ ಮಾಡಿಸಬೇಕು. ನಮ್ಮ ಜೀವಮಾನವಿಡೀ ದುಡಿದ ಹಣವನ್ನು ಸೊಸೈಟಿಯಲ್ಲಿ ಠೇವಣಿ ಇರಿಸಿದ್ದೇವೆ. ಇದೀಗ ಹಣ ಹಿಂಪಡೆಯಲಾಗದೆ ತೊಂದರೆ ಅನುಭವಿಸುತ್ತಿದ್ದೇವೆ. ನಮ್ಮ ವಿರುದ್ದವೇ ದಾವೆಗಳನ್ನು ಹೂಡಲಾಗುತ್ತಿದೆ. ಇದರಿಂದ ಪ್ರತಿದಿನ ಕೋರ್ಟ್ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ಉಂಟಾಗಿದೆ. ಹಾಗಾಗಿ ಸೊಸೈಟಿಯಲ್ಲಿ ಆಗಿರುವ ಅವ್ಯವಹಾರಗಳ ಬಗ್ಗೆ ಎಸ್‌ಐಟಿ ಅಥವಾ ಇತರ ಯಾವುದೇ ತನಿಖಾ ಸಂಸ್ಥೆಯಿಂದ ಸಮಗ್ರ ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಸದಸ್ಯರಾದ ನಯನ ಶಿವಪ್ರಸಾದ್, ಸದಾನಂದ, ಪ್ರಮೋದ್ ಆರ್. ನಾಯಕ್, ರತ್ನಾಕರ ಉಪಸ್ಥಿತರಿದ್ದರು.






