
ಬಂಟ್ವಾಳ: ಅತ್ತೆ ಮನೆಯಲ್ಲಿ ವಾಸವಿದ್ದ ಮುಂಬಯಿ ಮೂಲದ ಯುವತಿ ನಾಪತ್ತೆಯಾದ ಘಟನೆ ಬೆಂಜನಪದವು, ಶಿವಾಜಿನಗರದಲ್ಲಿ ನಡೆದಿದೆ.
ನಾಪತ್ತೆಯಾದ ಯುವತಿಯನ್ನು ಮರಿಯಾ ಆಲ್ಬರ್ಟ್ ಡಿ’ಸೋಜಾ ಎಂದು ಗುರುತಿಸಲಾಗಿದೆ. ಮೂಲತಃ ಮುಂಬಯಿ ನಿವಾಸಿಯಾಗಿರುವ ಮರಿಯಾ ಅವರ ಕುಟುಂಬ ಪ್ರಸ್ತುತ ಕೂಡ ಮುಂಬಯಿಯಲ್ಲೇ ನೆಲೆಸಿದ್ದು, ಒಂದು ವರ್ಷದ ಹಿಂದೆ ಯುವತಿಯ ತಾಯಿ ನಿಧನರಾಗಿದ್ದರು. ಈ ಹಿನ್ನೆಲೆಯಲ್ಲಿ ಮರಿಯಾ ಕೆಲ ತಿಂಗಳಿನಿಂದ ಬೆಂಜನಪದವು ಶಿವಾಜಿನಗರದಲ್ಲಿರುವ ಅತ್ತೆ ಮೋಲಿ ಟೆಲ್ಲಿಸ್ ಅವರ ಮನೆಯಲ್ಲಿ ವಾಸವಿದ್ದರು. ತಂದೆ ಆಲ್ಬರ್ಟ್ ಡಿ’ಸೋಜಾ ಮುಂಬಯಿಯಲ್ಲೇ ವಾಸವಾಗಿದ್ದಾರೆ.
ನವೆಂಬರ್ 9ರಂದು ಅತ್ತೆ ಮೋಲಿ ಟೆಲ್ಲಿಸ್ ಚರ್ಚ್‌ಗೆ ತೆರಳಿದ್ದ ವೇಳೆ, ಮರಿಯಾ ಮನೆ ಬಿಟ್ಟು ಹೋಗಿದ್ದಾರೆ ಎನ್ನಲಾಗಿದ್ದು, ಬಳಿಕ ವಾಪಸ್ ಬಾರದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಯುವತಿಯ ಪತ್ತೆಗಾಗಿ ತನಿಖೆ ನಡೆಸುತ್ತಿದ್ದಾರೆ.






