ಪುತ್ತೂರು:ನೇತ್ರಾವತಿ–ಕುಮಾರಧಾರಾ ನದಿ ಸಂಗಮ ಸ್ಥಳದಲ್ಲಿರುವ ಪುರಾಣ ಪ್ರಸಿದ್ಧ ಉದ್ಭವ ಲಿಂಗಕ್ಕೆ ವರ್ಷಪೂರ್ತಿ ಪೂಜೆ ಸಲ್ಲಿಸಲು ಅವಕಾಶ ನೀಡುವಂತೆ ಉಪ್ಪಿನಂಗಡಿಯ ಅಘೋರ ಸಂಘಟನೆ ವತಿಯಿಂದ ಶಾಸಕ ಅಶೋಕ್ ರೈ ಅವರಿಗೆ ಮನವಿ ಸಲ್ಲಿಸಲಾಯಿತು.

ದಕ್ಷಿಣ ಕನ್ನಡ ಜಿಲ್ಲೆಯ ಐತಿಹಾಸಿಕ ಪುಣ್ಯಕ್ಷೇತ್ರವಾಗಿರುವ ಈ ಸಂಗಮದಲ್ಲಿನ ಉದ್ಭವ ಲಿಂಗಕ್ಕೆ ಶತಮಾನಗಳಿಂದ ಬೇಸಗೆ ಕಾಲದಲ್ಲಿ ವಿಶೇಷವಾಗಿ ಶಿವರಾತ್ರಿ ಹಾಗೂ ಮೂರು ಮಖೆ ಜಾತ್ರೆ ಸಂದರ್ಭಗಳಲ್ಲಿ ಧಾರ್ಮಿಕ ಪೂಜೆ ವಿಧಿವಿಧಾನಗಳು ನಡೆದುಕೊಂಡು ಬರುತ್ತಿವೆ. ಆದರೆ ಕಳೆದ ಮೂರು ವರ್ಷಗಳ ಹಿಂದೆ ಬಿಳಿಯೂರು ಬಳಿ ನೇತ್ರಾವತಿ ನದಿಗೆ ಅಣೆಕಟ್ಟು ನಿರ್ಮಿಸಿ 4 ಮೀ. ಎತ್ತರದಲ್ಲಿ ನೀರು ಸಂಗ್ರಹಿಸುತ್ತಿರುವುದರಿಂದ, ಹಿನ್ನೀರು ಉಪ್ಪಿನಂಗಡಿ ಕೂಟೇಲು ಪ್ರದೇಶದವರೆಗೆ ತಲುಪಿ ಉದ್ಭವ ಲಿಂಗ ಸಂಪೂರ್ಣ ಜಲಾವೃತವಾಗುತ್ತಿದೆ. ಈ ಪರಿಣಾಮ ವರ್ಷಪೂರ್ತಿ ನಡೆದು ಬರುತ್ತಿದ್ದ ಪೂಜೆ-ಪುನಸ್ಕಾರಗಳು ಸ್ಥಗಿತಗೊಂಡಿದ್ದು, ಭಕ್ತ ಸಮೂಹದಲ್ಲಿ ತೀವ್ರ ಬೇಸರ ಉಂಟಾಗಿದೆ.

ಅಣೆಕಟ್ಟು ನಿರ್ಮಾಣದಿಂದ ಕೆಲ ಕೃಷಿಕರಿಗೆ ಅನುಕೂಲವಾದರೂ, ಧಾರ್ಮಿಕ ವಿಧಿ-ವಿಧಾನಗಳಿಗೆ ತೊಂದರೆಯಾದ ಹಿನ್ನೆಲೆ ಪರ್ಯಾಯ ಕ್ರಮ ರೂಪಿಸಬೇಕು ಎಂಬ ಆಗ್ರಹ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.

ಈ ಹಿನ್ನೆಲೆಯಲ್ಲಿ 2026ರ ಮಾರ್ಚ್ 12 ರವರೆಗೆ ಅಣೆಕಟ್ಟಿನಲ್ಲಿ 2–3 ಮೀ. ಎತ್ತರದಲ್ಲಿ ಮಾತ್ರ ನೀರು ಸಂಗ್ರಹಿಸುವಂತೆ ಗೇಟ್ ಅಳವಡಿಸಬೇಕು, ಇದರಿಂದ ಹಿನ್ನೀರು ನೆಕ್ಕಿಲಾಡಿ ಭಾಗದವರೆಗೆ ಮಾತ್ರ ಉಳಿದು, ಉದ್ಭವ ಲಿಂಗವು ಪೂಜೆಗೆ ಗೋಚರವಾಗಲು ಸಾಧ್ಯವಾಗುತ್ತದೆ. ಮೂರು ಮಖೆ ಜಾತ್ರೆ ಮುಗಿದ ಬಳಿಕ (ಮಾ.12 ನಂತರ) ಗೇಟ್ ಎತ್ತರವನ್ನು 4 ಮೀಟರ್‌ಗೆ ಏರಿಸಿ, ಸಂಪೂರ್ಣ ನೀರು ಸಂಗ್ರಹಿಸಬಹುದು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಅಣೆಕಟ್ಟಿನ ಉದ್ದೇಶಕ್ಕೆ ಧಕ್ಕೆ ಬಾರದಂತೆ, ಸಾವಿರಾರು ವರ್ಷಗಳ ನಂಬಿಕೆ, ಸಂಪ್ರದಾಯ ಮತ್ತು ಧಾರ್ಮಿಕ ಆಚರಣೆಗಳನ್ನು ಉಳಿಸುವ ನಿಟ್ಟಿನಲ್ಲಿ ಸೂಕ್ತ ಪರಿಹಾರ ಒದಗಿಸಬೇಕೆಂದು ಸಂಘಟನೆ ಸದಸ್ಯರು ಶಾಸಕ ಅಶೋಕ್ ರೈ ಅವರಿಗೆ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!