
ಪುತ್ತೂರು:ತುಳುನಾಡಿನ ಪರಂಪರೆಯ ಅವಿಭಾಜ್ಯ ಅಂಗವಾಗಿರುವ ಜನಪದ ಕ್ರೀಡೆ ಕಂಬಳ ಉಳಿವಿಗಾಗಿ ನಿರಂತರ ಹೋರಾಟ ನಡೆಸಿದ ಪುತ್ತೂರು ಶಾಸಕ ಅಶೋಕ್ ರೈ ಅವರ ಪ್ರಯತ್ನಕ್ಕೆ ಮತ್ತೆ ಮಹತ್ವದ ಜಯ ಸಿಕ್ಕಿದೆ. ದಶಕಗಳ ಜನಪದ ಕ್ರೀಡೆಯಾದ ಕಂಬಳ, ಕಾನೂನು ಹೋರಾಟ ಮತ್ತು ಸಂಕಷ್ಟದ ಸನ್ನಿವೇಶ ಎದುರಿಸಿದ ಸಂದರ್ಭದಲ್ಲೂ, ಸುಪ್ರೀಂ ಕೋರ್ಟ್ ಮಟ್ಟದವರೆಗೆ ಹೋರಾಡಿ ಕಂಬಳ ಉಳಿಸಿದ ಪ್ರಮುಖ ನಾಯಕರಲ್ಲಿ ಅಶೋಕ್ ರೈ ಅವರ ಪಾತ್ರ ಮಹತ್ವದ್ದು.
ತುಳುನಾಡಿನ ಗಡಿಯನ್ನು ದಾಟಿ ಬೆಂಗಳೂರು ನಗರದಲ್ಲಿ ಕಂಬಳ ಆಯೋಜಿಸುವ ಮೂಲಕ, ಈ ಕ್ರೀಡೆಯನ್ನು ವಿಶ್ವಮಟ್ಟದಲ್ಲಿ ಪರಿಚಯಿಸುವ ಚಾರಿತ್ರಿಕ ಹೆಜ್ಜೆ ಇಟ್ಟ ಹೆಗ್ಗಳಿಕೆ ಕೂಡ ಅವರಿಗೆ ಸಲ್ಲುತ್ತದೆ. ಕಂಬಳದ ಆಯೋಜನೆ ಕಷ್ಟಸಾಧ್ಯ ಮತ್ತು ವೆಚ್ಚಬರಿತವಾದುದರಿಂದ ಈ ಕ್ರೀಡೆಗೂ ಸರಕಾರದ ಪ್ರೋತ್ಸಾಹ ಅಗತ್ಯವಿದೆ ಎಂದು ನಿರಂತರವಾಗಿ ಮನವಿ ಮಾಡಿದ್ದರು.
ಅದರ ಫಲವಾಗಿ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ, ಕರಾವಳಿ ಭಾಗದಲ್ಲಿ ನಡೆಯಲಿರುವ 10 ಕಂಬಳಗಳಿಗೆ ತಲಾ ₹5 ಲಕ್ಷದಂತೆ ಅನುದಾನ ಬಿಡುಗಡೆಗೊಳಿಸಿದೆ. ಇದಕ್ಕೆ ಪ್ರಮುಖ ಕಾರಣಕರ್ತರು ಪುತ್ತೂರು ಶಾಸಕ ಅಶೋಕ್ ರೈ ಅವರೇ ಎಂದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ಯಾವ್ಯಾವ ಕಂಬಳಕ್ಕೆ ಅನುದಾನ?
ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಮೂಲಕ 2024–25ನೇ ಸಾಲಿನ ಅನುದಾನ ಮಂಜೂರಾಗಿದ್ದು, ಈ ಕೆಳಗಿನ ಕಂಬಳಗಳಿಗೆ ತಲಾ ₹5 ಲಕ್ಷ ಸಹಾಯಧನ ದೊರಕಲಿದೆ:
ಪುತ್ತೂರು ಕಂಬಳ
ಉಪ್ಪಿನಂಗಡಿ ಜಪ್ಪು ಕಂಬಳ
ಬಂಟ್ವಾಳ ಕಂಬಳ
ವೇಣೂರು ಕಂಬಳ
ಮೂಲ್ಕಿ ಕಂಬಳ
ಮಂಗಳೂರು ಕಂಬಳ
ನರಿಂಗಾಣ ಕಂಬಳ
ಮೂಡಬಿದ್ರಿ ಕಂಬಳ
ಐಕಳ ಕಂಬಳ
ಇದರಿಂದ ತುಳುನಾಡಿನ ಕಂಬಳ ಆಯೋಜಕರಿಗೆ ಆರ್ಥಿಕ ಬಲ ದೊರಕಲಿದ್ದು, ಜನಪದ ಕ್ರೀಡೆಯ ಉಳಿವಿಗೆ ದೊಡ್ಡ ಪ್ರೋತ್ಸಾಹ ಸಿಕ್ಕಂತಾಗಿದೆ.
🗣️ ಶಾಸಕ ಅಶೋಕ್ ರೈ ಹೇಳಿಕೆ
> “ಕಂಬಳ ಅನ್ನೋದು ತುಳುನಾಡಿನ ಜೀವಾಳ. ಇದೊಂದು ಕ್ರೀಡೆ, ಜೊತೆಗೆ ನಮ್ಮ ಸಂಸ್ಕೃತಿಯ ಗುರುತು. ಕಂಬಳ ಉಳಿವಿಗೆ ಸರಕಾರದ ನೆರವು ಅಗತ್ಯ ಎಂಬ ನಿಟ್ಟಿನಲ್ಲಿ ನಾವು ನಿರಂತರವಾಗಿ ಹೋರಾಟ ನಡೆಸಿದ್ದೆವು. ಬೆಂಗಳೂರಿನಲ್ಲಿ ಕಂಬಳ ಆಯೋಜಿಸುವ ಮೂಲಕ ವಿಶ್ವಕ್ಕೆ ಪರಿಚಯಿಸಿದ್ದು ಅದಕ್ಕೊಂದು ಹೊಸ ಶಕ್ತಿ ನೀಡಿದೆ. ಯಾವುದೇ ಸರಕಾರವು ಇಲ್ಲಿವರೆಗೆ ಕಂಬಳಕ್ಕೆ ಅನುದಾನ ನೀಡಿರಲಿಲ್ಲ. ಈಗ ಮೊದಲ ಬಾರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಕಂಬಳಕ್ಕೆ ಅಧಿಕೃತ ಅನುದಾನ ನೀಡಿದೆ. ಇದು ಕರಾವಳಿ ಜನತೆಗೆ ಸಂದ ಗೌರವ. ರಾಜ್ಯ ಸರ್ಕಾರದ ಈ ನಿಲುವು ಅಭಿನಂದನಾರ್ಹ.”






