
ಪುತ್ತೂರು, ನ.12: ಕರ್ನಾಟಕ ಸರಕಾರ, ಬೆಂಗಳೂರು ನಗರ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ – ಬೆಂಗಳೂರು ಉತ್ತರ ಜಿಲ್ಲೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬೆಂಗಳೂರು ಉತ್ತರ ವಲಯ–1 ರ ಸಂಯುಕ್ತ ಆಶ್ರಯದಲ್ಲಿ ನಡೆದ 14ರ ವಯೋಮಾನದ ಬಾಲಕಿಯರ ವಿಭಾಗದ ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ದರ್ಜಿ–ಪಾಂಗಲಾಯಿ ಬೆಥನಿ ಆಂಗ್ಲ ಮಾಧ್ಯಮ ಶಾಲಾ ತಂಡ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಪುತ್ತೂರಿಗೆ ಕೀರ್ತಿ ತಂದಿದೆ.
ರಾಜ್ಯದ ನಾಲ್ಕು ವಿಭಾಗಗಳಾದ ಬೆಳಗಾವಿ, ಗುಲ್ಬರ್ಗಾ, ಬೆಂಗಳೂರು ಹಾಗೂ ಮೈಸೂರು ವಿಭಾಗಗಳ ತಂಡಗಳು ಸೆಣಸಾಟ ನಡೆಸಿದ್ದು, ಮೈಸೂರು ವಿಭಾಗವನ್ನು ಪ್ರತಿನಿಧಿಸಿದ್ದ ಬೆಥನಿ ಶಾಲಾ ತಂಡ ಅಸಾಧಾರಣ ಪ್ರದರ್ಶನ ನೀಡಿತು. ಮೊದಲ ಪಂದ್ಯದಲ್ಲಿ 50 ಅಂಕ, ದ್ವಿತೀಯ ಪಂದ್ಯದಲ್ಲಿ 51 ಅಂಕ ಹಾಗೂ ಫೈನಲ್‌ನಲ್ಲಿ 27 ಅಂಕಗಳ ಅಂತರದ ಗೆಲುವು ದಾಖಲಿಸಿ ರಾಜ್ಯದಲ್ಲೇ ಬಲಿಷ್ಠ ತಂಡವಾಗಿ ಹೊರಹೊಮ್ಮಿತು.
ತಂಡದ ಜುವೆನ್ನಾ ಡ್ಯಾಝಲ್ ಕುಟಿನ್ಹಾ ರಾಜ್ಯಮಟ್ಟದ ಆಲ್‌ರೌಂಡರ್ ವೈಯಕ್ತಿಕ ಚಾಂಪಿಯನ್ ಗೌರವಕ್ಕೆ ಭಾಜನರಾದರು. ತಂಡದಲ್ಲಿ ಸನ್ನಿಧಿ, ಹಾರ್ದಿಕಾ ಪಿ., ಜೆನಿಟಾ ಸಿಂದು ಪಸನ್ನ, ಆಯಿಷತ್ ಶಕೀಮಾ, ಫಾತಿಮತ್ ಆಫ್ರಾ, ಕೀರ್ತಿ, ಚೈತನ್ಯ ಪಿ., ಸಿಂಚನ, ಆತ್ಹ್ಮಿಕ, ಪ್ರಾಪ್ತಿ, ತನ್ವಿ, ಕೀರ್ತಿ ಪಾಲ್ಗೊಂಡಿದ್ದರು.
ವಿಶೇಷವೆಂದರೆ, ಕಳೆದ ಎರಡು ವರ್ಷಗಳಿಂದ ಲಿಟ್ಸ್ ಫ್ಲವರ್ ಶಾಲೆಯ ಹೆಸರಿನಲ್ಲಿ ಇದೇ ವಿದ್ಯಾರ್ಥಿನಿಯರ ತಂಡ ರಾಷ್ಟ್ರಮಟ್ಟಕ್ಕೆ ಆಯ್ಕೆಯ ಸಾಧನೆ ಮಾಡಿತ್ತು. ಈ ಬಾರಿ ಬೆಥನಿ ಶಾಲೆಯ ಬ್ಯಾನರ್‌ನಡಿಯಲ್ಲಿ ಸ್ಪರ್ಧಿಸಿದ ತಂಡ ಪುತ್ತೂರಿಗೆ ಸತತ ಮೂರನೇ ವರ್ಷ ರಾಷ್ಟ್ರಮಟ್ಟದ ಅರ್ಹತೆಯನ್ನು ತಂದುಕೊಟ್ಟು ಐತಿಹಾಸಿಕ ಸಾಧನೆ ಮಾಡಿದೆ.
ಮುಖ್ಯ ಶಿಕ್ಷಕಿ ಭಗಿನಿ ಅನಿತಾ ಟ್ರಸ್ಸಿ ಮಾರ್ಗದರ್ಶನದಲ್ಲಿ, ಶಿಕ್ಷಕ ಬಾಲಕೃಷ್ಣ ರೈ ಅವರ ತರಬೇತಿಯಡಿ ತಂಡ ಸತತ ಮೂರನೇ ಬಾರಿಗೆ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದು ಹ್ಯಾಟ್ರಿಕ್ ಸಾಧನೆ ದಾಖಲಿಸಿದೆ.
ವಿಜಯವಾಡದಲ್ಲಿ ರಾಷ್ಟ್ರೀಯ ಪಂದ್ಯ
ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟವು ಡಿಸೆಂಬರ್ ಮೂರನೇ ವಾರದಲ್ಲಿ ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆಯಲಿದ್ದು, ಅಲ್ಲಿ ಕರ್ನಾಟಕ ರಾಜ್ಯವನ್ನು ಪುತ್ತೂರಿನ ಪ್ರತಿಭಾನ್ವಿತ ಬಾಲಕಿಯರು ಪ್ರತಿನಿಧಿಸಲಿದ್ದಾರೆ.






