ಉಳ್ಳಾಲ: ನಾಯಿಯೊಂದರ ಭೀಕರ ದಾಳಿಗೆ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದ ಕುಂಪಲದಲ್ಲಿ ಶುಕ್ರವಾರ (ನ.14) ಮುಂಜಾನೆ ನಡೆದಿದೆ.

ಮೃತ ವ್ಯಕ್ತಿಯನ್ನು ಕುಂಪಲ ನಿವಾಸಿ ದಯಾನಂದ (60 ವ) ಎಂದು ಗುರುತಿಸಲಾಗಿದೆ. ನಾಯಿಯ ಭೀಕರ ದಾಳಿಗೆ ಒಳಗಾದ ಮೃತದೇಹ ಕಂಡ ಜನರು ಆತಂಕಕ್ಕೆ ಒಳಗಾಗಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 66ರ ಕುಂಪಲ ಬೈಪಾಸ್‌ ಬಳಿ ರಸ್ತೆ ಬದಿಯ ಅಂಗಡಿಯ ಎದುರಲ್ಲಿ ಕಳೆದ ರಾತ್ರಿ ದಯಾನಂದ ಮಲಗಿದ್ದರು. ಮದ್ಯಪಾನ ಸೇವಿಸಿ ಮಲಗಿದ್ದ ಇವರ ಮೇಲೆ ಮುಂಜಾನೆ ವೇಳೆ ನಾಯಿ ದಾಳಿ ಮಾಡಿದೆ. ಈ ವೇಳೆ ಅಲ್ಲಿಂದ ರಸ್ತೆಯ ಮತ್ತೊಂದೆಡೆಯ ಮನೆಯತ್ತ ಓಡಿದ್ದರು. ಅಲ್ಲಿಯೂ ಬೆನ್ನಟ್ಟಿದ್ದ ನಾಯಿ ಮತ್ತೆ ದಾಳಿ ನಡೆಸಿ ಕೊಂದೇ ಹಾಕಿದೆ.

ರಸ್ತೆ ಬದಿ ಮೃತದೇಹ ಕಂಡ ಸ್ಥಳೀಯರು ಇದೊಂದು ಕೊಲೆ ಎಂದೇ ಭಾವಿಸಿದ್ದರು. ದೇಹದ ಮೇಲೆ ಕಡಿದ ರೀತಿಯ ಗಾಯಗಳು ಅಷ್ಟೊಂದು ತೀವ್ರವಾಗಿತ್ತು. ವ್ಯಕ್ತಿ ಕಣ್ಣು ಸೇರಿ ದೇಹ ಭಾಗಗಳು ಚೆಲ್ಲಾಪಿಲ್ಲಿಯಾಗಿದ್ದವು. ಸ್ಥಳಕ್ಕೆ ಆಗಮಿಸಿದ ವಿಧಿ ವಿಜ್ಞಾನ ತಜ್ಞರು ಇದೊಂದು ಪ್ರಾಣಿ ದಾಳಿ ಎಂದು ಸೂಚಿಸಿದರು. ಬಳಿಕ ಇದು ನಾಯಿಯ ದಾಳಿ ಎಂದು ಖಚಿತವಾಯಿತು.

ಸದ್ಯ ನಾಯಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಘಟನೆಯಿಂದ ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ.

ಉಳ್ಳಾಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!