
ಬಂಟ್ವಾಳ: ನ.15, 2025 – ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ದುರ್ಮರಣಕ್ಕೆ ಗುರಿಯಾಗಿರುವ ದುರಂತ ಘಟನೆ ಬೆಳಕಿಗೆ ಬಂದಿದೆ.
ಬೆಂಗಳೂರಿನಿಂದ ಉಡುಪಿಯ ಕಡೆಗೆ ತೆರಳುತ್ತಿದ್ದ KA 02 AE 6146 ಇನ್ನೋವಾ ಕಾರು ಬಂಟ್ವಾಳದ ಬಿ.ಸಿ. ರೋಡ್ ನಾರಾಯಣ ಗುರು ವೃತ್ತದ ಬಳಿ ಚಾಲಕನ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ.
ಅಪಘಾತದಲ್ಲಿ ಪ್ರಯಾಣಿಕರಾದ ಬೆಂಗಳೂರು ನಿವಾಸಿ ರವಿ (64), ನಂಜಮ್ಮ (75), ರಮ್ಯಾ (23) ಘಟನಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರಿನಲ್ಲಿ ಇದ್ದ ಇನ್ನೂ ಆರು ಮಂದಿ — ಸುಶೀಲ, ಕೀರ್ತಿ ಕುಮಾರ್, ಕಿರಣ್, ಬಿಂದು, ಪ್ರಶಾಂತ್ ಹಾಗೂ ಚಾಲಕ ಸುಬ್ರಹ್ಮಣ್ಯ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಮೃತರು ಹಾಗೂ ಗಾಯಾಳುಗಳು ಎಲ್ಲರೂ ಪರಸ್ಪರ ಸಂಬಂಧಿಕರಾಗಿದ್ದು, ಕುಟುಂಬ ಸಮೇತ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಬಂಟ್ವಾಳ ಸಂಚಾರ ಪೊಲೀಸ್ ಸಿಬ್ಬಂದಿ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅ.ಕ್ರ:151/25, ಕಲಂ: 281, 125A, 106 BNS ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.
ಪೊಲೀಸರು ಅಪಘಾತದ ನಿಖರ ಕಾರಣ ತಿಳಿದುಬಂದಿಲ್ಲದಿದ್ದು, ಹೆಚ್ಚಿನ ತನಿಖೆ ಮುಂದುವರಿಸುತ್ತಿದ್ದಾರೆ.






