
ಕಡಬ: ಮನೆಯ ಹೊರ ಭಾಗದ ಕೊಟ್ಟಿಗೆಯಲ್ಲಿ ಮಲಗಿದ್ದ ಮಹಿಳೆಯ ಮೇಲೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ ಪ್ರಕರಣ ಕಡಬ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ನವೆಂಬರ್ 13ರ ರಾತ್ರಿ ಸಂತ್ರಸ್ಥ ಮಹಿಳೆ ಕೊಟ್ಟಿಗೆಯಲ್ಲಿ ಮಲಗಿದ್ದ ವೇಳೆ, ಸ್ಥಳೀಯ ವ್ಯಕ್ತಿ ಉಮೇಶ್ ಗೌಡ ಎಂಬಾತ ಅಲ್ಲಿ ಬಂದು ಕಿರುಕುಳಕ್ಕೆ ಯತ್ನಿಸಿದ್ದಾನೆ. ಮಹಿಳೆ ಸಹಾಯಕ್ಕಾಗಿ ಕಿರುಚಿದಾಗ ಮನೆಯೊಳಗಿದ್ದ ಗಂಡ ಮತ್ತು ಮಕ್ಕಳು ಸ್ಥಳಕ್ಕೆ ಧಾವಿಸಿದ್ದಾರೆ.
ಈ ವೇಳೆಯಲ್ಲಿ ಆರೋಪಿ ಅವರ ಮೇಲೂ ಹಲ್ಲೆ ನಡೆಸಿ, ಅಲ್ಲಿಂದ ಪರಾರಿಯಾಗುತ್ತಿದ್ದಾಗ ಪರಿಶಿಷ್ಟ ಪಂಗಡಕ್ಕೆ ಸೇರಿದ ಮಹಿಳೆಗೆ ಜಾತೀವಾಚಕ ನಿಂದನೆ ಮಾಡಿದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದೆ.
ಘಟನೆಯ ಹಿನ್ನೆಲೆಯಲ್ಲಿ ಕಡಬ ಪೊಲೀಸ್ ಠಾಣೆಯಲ್ಲಿ ಅ.ಕ್ರ 78/2025, ಕಲಂ 74, 115(2) BNS-2023 ಹಾಗೂ ಎಸ್‌ಸಿ/ಎಸ್‌ಟಿ (ಅತಿಕ್ರಮಣ ನಿಷೇಧ) ಕಾಯ್ದೆಯ 3(1)(w)(i), 3(1)(r) ಸೆಕ್‌ಷನ್‌ಗಳಡಿಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸರು ತನಿಖೆ ಮುಂದುವರೆಸಿ, ನವೆಂಬರ್ 16ರಂದು ಆರೋಪಿತ ಉಮೇಶ್ ಗೌಡನನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನಂತರ ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.






