
ಮಂಗಳೂರು: ಕಸ್ಟಮ್ಸ್ ಅಧಿಕಾರಿಗಳ ಹೆಸರನ್ನು ದುರುಪಯೋಗಪಡಿಸಿಕೊಂಡು ನಾಗರಿಕರಿಂದ ಲಕ್ಷಾಂತರ ರೂಪಾಯಿ ವಂಚನೆ ನಡೆಸಿದ ಸೈಬರ್ ಕ್ರೈಂ ಚಟುವಟಿಕೆಯೊಂದು ಮಂಗಳೂರು ನಗರ ಸಿ.ಇ.ಎನ್ ಕ್ರೈಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭೇದನೆಯಾಗಿದೆ. ಪ್ರಕರಣದಲ್ಲಿ 300ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳು, 250ಕ್ಕೂ ಹೆಚ್ಚು ಸಿಮ್‌ಗಳು ಬಳಕೆಯಾಗಿರುವುದು ತನಿಖೆಯಿಂದ ಬಹಿರಂಗವಾಗಿದೆ.
ಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣ ಸಂಖ್ಯೆ 45/2024, ಐಟಿ ಕಾಯಿದೆ 66(C), 66(D) ಹಾಗೂ ಐಪಿಸಿ ಕಲಂ 420ರ ಅಡಿ ದೂರು ದಾಖಲಾಗಿತ್ತು. ದೂರುದಾರರಿಗೆ ಕಸ್ಟಮ್ಸ್ ಹೆಸರಿನಲ್ಲಿ ಮೋಸಗಾರರು ಸಂಪರ್ಕಿಸಿಕೊಂಡು ಹಂತ ಹಂತವಾಗಿ ₹7,27,000 ಹಣವನ್ನು ಕೈಗೆತ್ತಿಕೊಂಡಿದ್ದರು ಎಂದು ದೂರು ನೀಡಲಾಗಿತ್ತು.
ಬಂಧಿತರ ವಿವರ —
1. Damenjoy Reang (27), ಧಲೈ — ತ್ರಿಪುರಾ ರಾಜ್ಯ
2. Hmngte Reail Kom @ Mangte Amosh (33), ಕಾಂಪೋಕ್ಪಿ — ಮಣಿಪೂರ ರಾಜ್ಯ
ಪೊಲೀಸರು ವಂಚನೆಗೆ ಬಳಸಲಾಗಿದ್ದ ಬ್ಯಾಂಕ್ ಖಾತೆಗಳ ಲೆನ್ದೆಣಿಕಾ ಮಾಹಿತಿ ಸಂಗ್ರಹಿಸಿ, ಮೊದಲ ಆರೋಪಿತ Damenjoy Reang ಎಂಬಾತನನ್ನು 13-11-2025ರಂದು ಬೆಂಗಳೂರಿನಲ್ಲಿ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ತನಿಖೆ ಮುಂದುವರೆಸಿದ ಪೊಲೀಸರು ಪಡೆದ ಸುಳಿವಿನ ಆಧಾರದಲ್ಲಿ ಎರಡನೇ ಆರೋಪಿತ Mangte Amosh ಎಂಬಾತನನ್ನು 15-11-2025ರಂದು ಬೆಂಗಳೂರಿನಲ್ಲಿ ಬಂಧಿಸಿ, 16-11-2025ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಇವರಿಗೂ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ತನಿಖೆಯ ವೇಳೆ, ಆರೋಪಿತ Mangte Amosh ಸೈಬರ್ ವಂಚನೆ ಚಟುವಟಿಕೆಗೆ 300ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳು ಮತ್ತು 250ಕ್ಕೂ ಹೆಚ್ಚು ಸಿಮ್ ಕಾರ್ಡ್‌ಗಳು ಬಳಕೆ ಮಾಡಿರುವುದು ಪತ್ತೆಯಾಗಿದೆ. ಆರೋಪಿಯಿಂದ
– 8 ಮೊಬೈಲ್ ಫೋನ್‌ಗಳು
– 20 ವಿವಿಧ ಬ್ಯಾಂಕ್‌ಗಳ ಡೆಬಿಟ್ ಕಾರ್ಡ್‌ಗಳು
– 18 ಬ್ಯಾಂಕ್ ಪಾಸ್‌ಬುಕ್‌ಗಳು
– 11 ಚೆಕ್ ಬುಕ್‌ಗಳು
– 7 ಸಿಮ್ ಕಾರ್ಡ್‌ಗಳು
ಸ್ವಾಧೀನಪಡಿಸಿಕೊಳ್ಳಲಾಗಿದೆ.
ಪ್ರಕರಣ ಭೇದನೆಯಲ್ಲಿ ಮಂಗಳೂರು ನಗರ ಸಿ.ಇ.ಎನ್ ಕ್ರೈಂ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಪರಿಣಾಮಕಾರಿ ಕಾರ್ಯಾಚರಣೆ ನಡೆಸಿದ್ದಾರೆ.






